ನಾಲ್ಕನೆ ಹಂತದ ಚುನಾವಣೆಗಳು ಮುಗಿದಿದ್ದು, ಇನ್ನು ಒಂದೇ ಹಂತದ ಚುನಾವಣೆ ಬಾಕಿಯುಳಿದಿದೆ. ದಿನಗಳು ಸಮೀಪಿಸಿರುವಂತೆಯೇ ಶತಾಯಗತಾಯ ದೆಹಲಿ ಗದ್ದುಗೆಯನ್ನೇರಲು ಪ್ರಯತ್ನಿಸುವ ಮೈತ್ರಿ ಕೂಟಗಳು ಸಾಧ್ಯವಿರುವಷ್ಟು ಪಕ್ಷಗಳನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಸರ್ಕಸ್ ಮಾಡುತ್ತಿವೆ. ಚುನಾವಣಾ ಮುಂಚಿನ ಜಗಳವನ್ನೆಲ್ಲ ಮರೆಯುತ್ತಿರುವ ಪಕ್ಷಗಳು ಎಡ-ಬಲ ಎನ್ನದೆ ಎಲ್ಲರತ್ತ ಕುಡಿನೋಟಹರಿಸಿ ಮತ್ತೆ ದಾಂಪತ್ಯಕ್ಕೆ ಬಂದಾರೇನೋ ಎಂಬ ಆಸೆಯಲ್ಲಿವೆ. ಪರಸ್ಪರ ಮುನಿಸಿಕೊಂಡು ದೂರದೂರ ಸಾಗಿದ್ದ ಪಕ್ಷಗಳೀಗ ತಮ್ಮ ಮಾಜಿ ಮಿತ್ರರ, ಭಾವಿ(!) ಮಿತ್ರರ ಉತ್ತಮ ಗುಣಗಳನ್ನು ಹುಡುಕಿ-ಹುಡುಕಿ, ಕೆದಕಿ-ಕೆದಕಿ ಶ್ಲಾಘಿಸುತ್ತಿವೆ. ಸಂಯುಕ್ತ ಸರ್ಕಾರ ಅನಿವಾರ್ಯ ಎಂಬುದು ನಿಚ್ಚಳವಾಗಿರುವ ಕಾರಣ ಕಾಂಗ್ರೆಸ್ ಎಡ-ಬಲ ಹಾಗೂ ದಕ್ಷಿಣದತ್ತ ಹೊಸ ಮೈತ್ರಿಗೆ ಹುಡುಕಾಟ ನಡೆಸುತ್ತಿದೆ. ಲೋಕಸಭೆಯ 86 ಸ್ಥಾನಗಳಿಗೆ ಮಾತ್ರ ಇನ್ನು ಚುನಾವಣೆ ಬಾಕಿ ಇದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಗಳು ಹೊಸ ಮಿತ್ರರಿಗಾಗಿ ಬೇಟೆ ಆರಂಭಿಸಿವೆ. ವಿರೋಧಿಗಳ ತೆಕ್ಕೆಯಲ್ಲಿರುವ ಪಕ್ಷಗಳನ್ನು ತಮ್ಮ ವಶಕ್ಕೆ ಪಡೆಯುವ ತೆರೆಮರೆಯ ಪ್ರಯತ್ನ ಸಾಗಿದೆ. ಎನ್‌ಡಿಎ ವಶದಲ್ಲಿರುವ ಜೆಡಿಯುವನ್ನು ತನ್ನತ್ತ ಸೆಳಯುವ ದೊಂಬರಾಟ ಮುಂದುವರಿಸಿರುವ ಕಾಂಗ್ರೆಸ್, ನಿತೀಶ್ ಕುಮಾರ್ ಹಾಗೂ ಅವರ ಸರ್ಕಾರವನ್ನು ಬಹಿರಂಗವಾಗಿ ಹೊಗಳಲು ಆರಂಭಿಸಿದೆ. ಆದರೆ ಅತ್ತ ನಿತೀಶ್ ವೈರಿಯಾಗಿರುವ ಲಾಲೂ ಮಾತ್ರ ಗುರ್ರ್ ಅಂದಿದ್ದಾರೆ. ಕಾಂಗ್ರೆಸ್‌ನ ತಾರಾ ನಾಯಕ ರಾಹುಲ್ ಇತ್ತೀಚೆ ಎಡಪಕ್ಷಗಳನ್ನು ಹಾಡಿಹೊಗಳಿ ಅವರು ನಮ್ಮೊಡನೆ ಇದ್ದರೆ ಮಾತ್ರ ಸುಖವಾಗಿರಲು ಸಾಧ್ಯ ಎಂದು ಹೇಳಿದ್ದರು. ಆದರೆ ಎಡಪಕ್ಷಗಳು ಮಾತ್ರ ಇನ್ನು ಕಾಂಗ್ರೆಸ್‌ನೊಂದಿಗೆ ಸಂಸಾರ ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಆದರೆ ಮೇ 16ರ ಬಳಿಕ ಮಾತ್ರ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದಿವೆ. ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರತ್ತ ಗಾಳಹಾಕಲೂ ಕಾಂಗ್ರೆಸ್ ಮುಂದಾಗಿದೆ.ಇತ್ತ ಕೆಲವು ಸ್ಥಾನಗಳನ್ನು ಕೈಲಿ ಹಿಡಿದಿರುವ ಸಣ್ಣಪುಟ್ಟ ಪಕ್ಷಗಳು ಗೆದ್ದೆತ್ತಿನ ಬಾಲ ಹಿಡಿಯಲು ಸನ್ನದ್ಧವಾಗಿವೆ. ಈ ಮಧ್ಯೆ ತಮ್ಮ ಬೆಂಬಲಕ್ಕೆ ಪ್ರತಿಯಾಗಿ ಬೆಲೆಕೇಳುತ್ತಿವ ಪಕ್ಷಗಳೂ ಇವೆ. ಉತ್ತರಪ್ರದೇಶದಲ್ಲಿರುವ ಮಾಯಾವತಿ ಸರ್ಕಾರವನ್ನು ಉರುಳಿಸಲು ನೆರವಾದರೆ ಯುಪಿಎಗೆ ಬೆಂಬಲ ನೀಡುವುದಾಗಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.ಕಾಂಗ್ರೆಸ್ ಇತ್ತ ಹೊಸ ಮೈತ್ರಿಯ ಕುರಿತು ಬಂಬಡಾ ಬಜಾಯಿಸುತ್ತಿದ್ದರೆ, ಅತ್ತ ಎನ್‌ಡಿಎ ರಹಸ್ಯವಾಗಿ ತನ್ನ ಕಾರ್ಯತಂತ್ರ ಮುಂದುವರಿಸಿದೆ. ಚುನಾವಣೋತ್ತರ ಮೈತ್ರಿಯಲ್ಲಿ ಗೆದ್ದೇಗೆಲ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ಬಿಜೆಪಿ ಬೀಗುತ್ತಿದ್ದು, ತಮ್ಮ ಪಕ್ಷವು ಯಶಸ್ವಿಯಾಗಲಿದೆ ಎಂದು ಹೇಳುತ್ತಿದೆ.ಎನ್‌ಡಿಎ ಮೈತ್ರಿಕೂಟಕ್ಕೆ ಯಾವುದೇ ಕೊರತೆ ಉಂಟಾಗದು ನಾವು ಎಲ್ಲಾ ಮುಂಜಾಗ್ರತೆ ವಹಿಸಿದ್ದೇವೆ ಎಂದು ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.ಮತಎಣಿಕೆಗೆ ಇನ್ನೂ ಒಂದು ವಾರವಿರುವ ಕಾರಣ ಈ ಅವಧಿಯಲ್ಲಿ ಏನು ಬೇಕಾದರೂ ನಡೆಯುವ ಸಾಧ್ಯತೆ ಇದೆ. ಯಾರು ಯಾರನ್ನು ಕಚ್ಚಿಕೊಳ್ಳುತ್ತಾರೆ, ಮತ್ತು ಯಾರು ಎಲ್ಲಿಂದ ಜಾರಿಕೊಳ್ಳುತ್ತಾರೆ ಎಂಬ ಸ್ಪಷ್ಟ ಚಿತ್ರಣ ಮೇ 17ರಷ್ಟೊತ್ತಿಗೆ ಸ್ಪಷ್ಟವಾಗಲಿದೆ. |