ಶೈಕ್ಷಣಿಕ ಸಂಸ್ಥೆಗಳಲ್ಲಿ ರ‌್ಯಾಗಿಂಗ್ ಪಿಡುಗನ್ನು ಮಟ್ಟಹಾಕುವ ನಿಟ್ಟಿನಲ್ಲಿ ರ‌್ಯಾಗಿಂಗ್ ವಿರೋಧಿ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ಹಿಮಾಚಲ ಪ್ರದೇಶದ ವೈದ್ಯಕೀಯ ಕಾಲೇಜೊಂದರಲ್ಲಿ ಹಿರಿಯ ವಿದ್ಯಾರ್ಥಿಗಳ ಹಲ್ಲೆಯಿಂದ ಸಾವಿಗೀಡಾಗಿರುವ ಅಮನ್ ಕಚ್ರೂ ಕುಟುಂಬವು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಸುಪ್ರೀಂ ಕೋರ್ಟ್ ಈ ಆದೇಶ ಪಾಸುಮಾಡಿದೆ.
ರ‌್ಯಾಗಿಂಗ್ ಬಲಿಪಶುಗಳಿಗೆ ಸಹಾಯ ಮಾಡುವುದರೊಂದಿಗೆ ಶೀಘ್ರಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ತಾಕೀತು ಮಾಡಿದೆ.
ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಪ್ರತೀ ಕಾಲೇಜೂ ಸಹ ಮನಶಾಸ್ತ್ರಜ್ಞರನ್ನು ಹೊಂದಿರಬೇಕು ಎಂಬುದಾಗಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ನ್ಯಾಯಪೀಠ ಹೇಳಿದೆ. ಮದ್ಯಪಾನ ಪ್ರಕರಣಗಳಿಗೆ ಸಂಬಂಧಿಸಿದ್ದರೆ ಶೈಕ್ಷಣಿಕ ಸಂಸ್ಥೆಗಳು ಈ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕು ಎಂದೂ ಅದು ತಿಳಿಸಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುತ್ತಿರುವ ರ‌್ಯಾಗಿಂಗ್ ಪ್ರಕರಣಗಳನ್ನು ತಡೆಯಲು ನ್ಯಾಯಾಲಯ ನೀಡಿರುವ ನಿರ್ದೇಶನಕ್ಕೆ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ಎಲ್ಲಾ ರಾಜ್ಯಗಳು ಸುಪ್ರೀಂ ಕೋರ್ಟಿಗೆ ಮುಚ್ಚಳಿಕೆ ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ. |