" ಕಳೆದ ನವೆಂಬರ್ 26ರಂದು ಗಿರ್‌ಗಾಂವ್ ಚೌಪಾಟಿಯಲ್ಲಿ ಪ್ರಮುಖ ಆರೋಪಿ ಅಜ್ಮಲ್ ಅಮೀರ್ ಕಸಬ್ ಎಎಸ್ಐ ತುಕಾರಾಂ ಓಂಬಳೆ ಮೇಲೆ ಗುಂಡುಹಾರಿಸಿದ್ದು ಅವರಿಗೆ ಗುಂಡು ತಗುಲಿರುವುದನ್ನು ತಾನು ಕಂಡಿದ್ದೇನೆ" ಎಂಬುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ಮುಂಬೈದಾಳಿ ಪ್ರಕರಣದ ವಿಚಾರಣೆ ವೇಳೆಗೆ ತಿಳಿಸಿದ್ದಾರೆ.ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಭಾಸ್ಕರ್ ಕದಮ್ ಅವರು ಈ ಸಾಕ್ಷ್ಯ ನುಡಿದಿದ್ದು, ಮೃತ ಉಗ್ರ ಅಬು ಇಸ್ಮಾಯಿಲ್ ಮೇಲೆ ಗುಂಡೆಸೆದ ಅಧಿಕಾರಿಗಳಲ್ಲಿ ತಾನೂ ಒಬ್ಬನಾಗಿದ್ದೇನೆ ಎಂದು ಹೇಳಿದರು. ದಾಳಿಯ ದಿನದಂದು ಮೃತ ಇಸ್ಮಾಯಿಲ್ ಕಸಬ್‌ನೊಂದಿಗೆ ಸ್ಕೋಡಾ ಕಾರಿನಲ್ಲಿದ್ದ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಇಸ್ಮಾಯಿಲ್ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಾಗ ಕಸಬ್ ಕಾರಿನ ಎಡಭಾಗದ ಮುಂದಿನ ಬಾಗಿಲು ತೆರೆದು ಕೆಳಗೆ ಬೀಳುವಂತೆ ನಟಿಸಿದ ಎಂಬುದಾಗಿ ಕದಂ ಅವರು ವಿಶೇಷ ಅಭಿಯೋಜಕ ಉಜ್ವಲ್ ನಿಕಾಮ್ ಅವರಿಗೆ ಹೇಳಿಕೆ ನೀಡಿದರು.ಎಎಸ್ಐ ಓಂಬಳೆ ಮತ್ತು ಎಪಿಐ ಸಂಜಯ್ ಗೋವಿಲ್ಕರ್ ಅವರು ಕಸಬ್ ಬಳಿ ಧಾವಿಸಿದಾಗ, ಕಸಬ್ ಓಂಬಳೆ ಮೇಲೆ ಗುಂಡು ಹಾರಿಸಲಾರಂಭಿಸಿದ ಎಂದು ಅವರು ನುಡಿದರು.ಕಸಬ್‌ನ ಮೇಲೆರಗಿ ಆತನನ್ನು ಹಿಡಿದು, ನಿರಾಯುಧನನ್ನಾಗಿಸಲು ಯತ್ನಿಸಿದರು. ಓಂಬಳೆಯವರು ಗಾಯಗೊಂಡಾಗ, ಪೊಲೀಸ್ ತಂಡ ಒಂದು ಕಸಬ್‌ನಿಗೆ ಲಾಠಿ ಏಟು ನೀಡಿದ್ದು, ಆತನ ಕೈಲಿದ್ದ ಎಕೆ 47 ಕಸಿದುಕೊಂಡರು ಎಂಬುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.ಓಂಬಳೆ ಮತ್ತು ಗೋವಿಲ್ಕರ್ ಅವರನ್ನು ಪಕ್ಕದ ಆಸ್ಪತ್ರೆಗೆ ಮೊಬೈಲ್ ಪೊಲೀಸ್ ವ್ಯಾನಲ್ಲಿ ಕರೆದೊಯ್ಯಲಾಯಿತು. ಇದೇ ವೇಳೆ ಇಸ್ಮಾಯಿಲ್ ಮತ್ತು ಕಸಬ್‌ನನ್ನು ಇನ್ನೊಂದು ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು ಎಂದು ಅವರು ಹೇಳಿದರು. |