ಶಿವನ ತೃತೀಯ ಅಕ್ಷಿಯಾಗುತ್ತೇನೆಂದು ಹೇಳುವ ಮೂಲಕ ಅಮರ್ ಸಿಂಗ್ ತನ್ನ ಮೇಲೆ ಬೆದರಿಕೆ ಹಾಕಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಸ್ಲಿಂ ನಾಯಕ ಅಜಂ ಖಾನ್ ಹೇಳಿದ್ದಾರೆ. "ಶಿವನ ಮೂರನೆ ಕಣ್ಣಾಗಿ ತನ್ನನ್ನು ನಾಶಪಡಿಸುವುದಾಗಿ ಅಮರ್ ಸಿಂಗ್ ಬೆದರಿಸಿದ್ದಾರೆ. ಇದು ಅವರ ಮನೋಭಿಲಾಷೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ... ಅದು ನನ್ನ ರಾಜಕೀಯ ಅಥವಾ ದೈಹಿಕ ವಿನಾಶವಾಗಿರಬಹುದು ಇಲ್ಲವೇ ಎರಡೂ ಆಗಿರಬಹುದು" ಎಂಬುದಾಗಿ ರಾಂಪುರದಲ್ಲಿ ಖಾನ್ ಹೇಳಿದ್ದಾರೆ.
"ರಾಜಕೀಯದಲ್ಲಿ ಇಂತಹ ಅವಹೇಳನಕಾರಿ ಮತ್ತು ಘನತೆ ರಹಿತ ಭಾಷೆಯ ಬಳಕೆಯು ಅವರ ಬುದ್ಧಿಯನ್ನು ತೋರಿಸುತ್ತದೆ" ಎಂದು ಹೇಳಿದ ಖಾನ್, ಅಮರ್ ಭಾಷಣದಲ್ಲಿ ತನಗೆ ಮತ್ತು ಕುಟುಂಬಕ್ಕೆ ಸ್ಪಷ್ಟವಾದ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ.
ಅಮರ್ ಸಿಂಗ್ ಅವರು ಇಂತಹ ಹೇಳಿಕೆಯನ್ನು ನೀಡಲು ಬಿಜೆಪಿ-ಆರೆಸ್ಸೆಸ್ ನಿಯಂತ್ರಣದ ಧಾಕಿಯ ಗ್ರಾಮದ ಶಹಬಾದ್ ತೆಹ್ಸೀಲನ್ನು ಆರಿಸಿಕೊಂಡಿದ್ದು, ಅಲ್ಲಿನ ನಿವಾಸಿಗಳಾದ ಹಿಂದೂಗಳನ್ನು ಉದ್ರೇಕಿಸಲು ಎಲ್ಲಾ ತಂತ್ರಗಳನ್ನು ಬಳಸಿದ್ದಾರೆ ಎಂದು ಪಕ್ಷದಲ್ಲಿ ಅಂತಹ ಪ್ರಾಮುಖ್ಯತೆ ಏನೂ ಇಲ್ಲದ ಖಾನ್ ದೂರಿದ್ದಾರೆ.
"ಮಾಜಿ ಭೂಗತ ವ್ಯಕ್ತಿ ಅಬುಸಲೇಂ ಎಂಬಾತನ ಸಹಚರರು ಎಂದು ಹೇಳುವ ಸುಮಾರು 700 ಮಂದಿ ಕಳೆದ ಕೆಲವು ದಿನಗಳಿಂದ ಹರಿದು ಬರುತ್ತಿದ್ದಾರೆ. ಅವರು ತಮ್ಮನ್ನು ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದ ರಾಂಪುರದ ಉಲೇಮಾಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಈ ವ್ಯಕ್ತಿಗಳು ನಗರದಲ್ಲಿ ಪ್ರಚಾರ ನಡೆಸುತ್ತಿದ್ದು, ಇದು ಇಲ್ಲಿನ ವಾತಾವರಣವನ್ನು ಕೆಡಿಸಬಹುದೆಂಬ ಭಯ ಮೂಡಿಸುತ್ತದೆ. ಇವರು ಸ್ಥಳೀಯ ಯುವಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಜಿಲ್ಲಾಡಳಿತವು ಇವರ ವಿರುದ್ಧ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ" ಎಂಬುದಾಗಿ ಖಾನ್ ನುಡಿದರು. ಈ ಕುರಿತು ತಾನು ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವುದಾಗಿಯೂ ನುಡಿದ ಅವರು ಚುನಾವಣಾ ಆಯೋಗವು ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗುರುವಾರದ ಅಮರ್ ಸಿಂಗ್ ಹೇಳಿಕೆ ಅಸಹಜವಾಗಿದೆ. ತನಗೆ ಅವರ ಮೇಲೆ ಅನುಕಂಪ ಹುಟ್ಟುತ್ತಿದ್ದು, ಅವರ ಆರೋಗ್ಯ ಸುಧಾರಿಸಲಿ ಎಂಬುದಾಗಿ ತಾನು ದೇವರನ್ನು ಪ್ರಾರ್ಥಿಸುವುದಾಗಿ ವ್ಯಂಗ್ಯವಾಡಿದರು. ಆದರೆ ಅಮರ್ ಸಿಂಗ್ ಬೆದರಿಕೆ ಹಿನ್ನೆಲೆಯಲ್ಲಿ ತಾನು ಹೆಚ್ಚಿನ ಭದ್ರತೆಯನ್ನು ಬಯಸುವುದಿಲ್ಲ ಎಂದು ನುಡಿದರು.
"ಖಾನ್ ತನಗೆ ಬೂಟನ್ನು ಉಡುಗೊರೆಯಾಗಿ ನೀಡುವುದನ್ನು ಎದುರುನೋಡುತ್ತಿದ್ದೇನೆ" ಎಂಬ ಅಮರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ನಾನು ಅಂತಹ ವಿಕೋಪಕ್ಕೆ ಹೋಗುವುದಿಲ್ಲ ಎಂದು ನುಡಿದರು.
|