ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಯುವ ನಾಯಕ ವರುಣ್ ಗಾಂಧಿ ಅವರ ಮೇಲೆ ಪ್ರಯೋಗಿಸಲಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಸಿಂಧು ಎಂದು ಅಲಹಾಬಾದ್ ಹೈಕೋರ್ಟ್ ಸಲಹಾ ಮಂಡಳಿ ಹೇಳಿದ್ದು, ತಕ್ಷಣವೇ ಎನ್ಎಸ್ಎ ಹಿಂತೆಗೆದುಕೊಳ್ಳುವಂತೆ ಶಿಫಾರಸು ಮಾಡಿದೆ. ಇದರೊಂದಿಗೆ, ಉತ್ತರ ಪ್ರದೇಶದ ಮಾಯಾವತಿ ಸರಕಾರವು ಎನ್ಎಸ್ಎ ಹಿಂತೆಗೆದುಕೊಳ್ಳಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.
ವರುಣ್ ಮೇಲೆ ಹೇರಲಾದ ಎನ್ಎಸ್ಎ ಅಮಾನ್ಯ ಎಂದು ಸಲಹಾ ಮಂಡಳಿ ಅಭಿಪ್ರಾಯಪಟ್ಟಿರುವುದಾಗಿ ಶುಕ್ರವಾರ ಉತ್ತರ ಪ್ರದೇಶ ಗೃಹ ಕಾರ್ಯದರ್ಶಿ ಜಾವೇದ್ ಅಹ್ಮದ್ ತಿಳಿಸಿದರು.
ಏಪ್ರಿಲ್ 28ರಂದು ಮಂಡಳಿಯೆದುರು ಹಾಜರಾಗಿದ್ದ ವರುಣ್, ಯಾವ ಆಧಾರದಲ್ಲಿ ತನ್ನ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತೋ, ಆ ಸಿಡಿಯನ್ನು ತಿದ್ದಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರು.
ಸುಪ್ರೀಂಕೋರ್ಟ್‌ನಿಂದ ದೊರೆತ ಪರೋಲ್ ಮೇಲೆ ಈಗ ಜೈಲಿನಿಂದ ಹೊರಗಿರುವ 29ರ ಹರೆಯದ ವರುಣ್ ಗಾಂಧಿ, ಮಾರ್ಚ್ 7 ಮತ್ತು 8ರಂದು ಅವರ ಕ್ಷೇತ್ರವಾದ ಫಿಲಿಬಿಟ್‌ನಲ್ಲಿ ಕೋಮುಹಿಂಸಾಚಾರ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಾರ್ಚ್ 28ರಂದು ಬಂಧಿಸಲಾಗಿತ್ತು.
ಇದೀಗ ವರುಣ್ ಮೇಲಿನ ಎನ್ಎಸ್ಎ ಹಿಂತೆಗೆಯಬೇಕೇ ಬೇಡವೇ ಎಂಬ ಕುರಿತು ಮಂಡಳಿ ಸಲಹೆಯನ್ನು ಪರಾಮರ್ಶಿಸಿದ ಬಳಿಕ ಮಾಯಾವತಿ ಸರಕಾರ ತೀರ್ಮಾನ ಕೈಗೊಳ್ಳಲಿದೆ.
ಫಿಲಿಬಿಟ್ ಜಿಲ್ಲಾಧಿಕಾರಿ ನೀಡಿದ ಪುರಾವೆಗಳು ತಮಗೆ ಮನದಟ್ಟು ಮಾಡಿಸುವಲ್ಲಿ ವಿಫಲವಾಗಿದೆ ಎಂದು ಶುಕ್ರವಾರ ಸಭೆ ಸೇರಿದ ಮಂಡಳಿಯು ಹೇಳಿದೆ. ರಾಜಕೀಯ ಕಾರಣಗಳಿಂದಾಗಿ ಮತ್ತು ತನ್ನ ರಾಜಕೀಯ ಪ್ರವೇಶಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ತನ್ನ ಮೇಲೆ ಎನ್ಎಸ್ಎ ಹೇರಲಾಗಿದೆ ಎಂದು ಮನೇಕಾ ಗಾಂಧಿ ಪುತ್ರ ವರುಣ್ ಹೇಳಿದ್ದಾರೆ. ಆದರೆ ಇದನ್ನು ಕೇಂದ್ರದ ಯುಪಿಎ ಸರಕಾರ ನಿರಾಕರಿಸಿತ್ತು. |