ಜಮ್ಮು ಕಾಶ್ಮೀರದ ದೋಡಾ ಪ್ರಾಂತ್ಯದಲ್ಲಿ ಕಳೆದ ಹನ್ನೆರಡು ಗಂಟೆಯಿಂದ ಉಗ್ರರು ಮತ್ತು ಸೇನಾಪಡೆಗಳ ನಡುವೆ ನಡೆಯುತ್ತಿದ್ದ ಗುಂಡಿನ ಕಾಳಗ ಅಂತ್ಯಗೊಂಡಿದ್ದು, ಲಷ್ಕರ್-ಇ-ತೋಯ್ಬದ ಉನ್ನತ ಕಮಾಂಡರ್ ಅಬು ಸಮಾಮ ಹಾಗೂ ಆತನ ಅಂಗರಕ್ಷಕ ಬರ್ಕತ್ ಅಲಿ ಎಂಬಿಬ್ಬರು ಹತರಾಗಿದ್ದಾರೆ.
ದೊಡಾದ ಮನೆಯೊಂದರಲ್ಲಿ ಅಡಗಿದ್ದ ಇಬ್ಬರು ಉಗ್ರರು ಸೇನಾಪಡೆಯತ್ತ ಉಗ್ರರು ಗುಂಡು ಹಾರಿಸಿದ್ದ ಪರಿಣಾಮ ಗುಂಡಿನ ಚಕಮಕಿ ಆರಂಭಗೊಂಡಿತ್ತು.
ಉಗ್ರರೊಂದಿಗಿನ ಕಾಳಗದ ವೇಳೆಗೆ ಸೇನೆಯು ಹತ್ತಿರದ ಮನೆಗಳನ್ನು ತೆರವುಗೊಳಿಸಿದ್ದು, ಮನೆಗೆ ಬೆಂಕಿಹಚ್ಚಿ ಉಗ್ರರನ್ನು ಉಸಿರುಗಟ್ಟಿಸಲು ಪ್ರಯತ್ನಿಸಿತ್ತು.
ಅಬು ಸಮಾಮ ಪಾಕಿಸ್ತಾನಿ ಪ್ರಜೆಯಾಗಿದ್ದರೆ ಆತನಿಗೆ ಸಹಕರಿಸುತ್ತಿದ್ದ ಬರ್ಕತ್ ಸ್ಥಳೀಯ ಉಗ್ರನಾಗಿದ್ದ ಎಂಬುದಾಗಿ ದೋಡಾ ಡಿಐಜಿ ಹೇಮಂತ್ ಲೋಹಿಯಾ ತಿಳಿಸಿದ್ದಾರೆ.
ಶುಕ್ರವಾರದಂದು ಸೇನೆಯು ಉಗ್ರರ ಮೂರು ಅಡಗುತಾಣಗಳನ್ನು ಪತ್ತೆಹಚ್ಚಿತ್ತು. ದೋಡಾ, ರಾಜೌರಿ ಜಿಲ್ಲೆಗಳಲ್ಲಿ ಪತ್ತೆಯಾಗಿರುವ ಈ ಅಡಗುತಾಣಗಳಲ್ಲಿ ಅಪಾರ ಪ್ರಮಾಣದ ಮದ್ದುಗುಂಡು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಎರಡು ಗ್ರೆನೇಡುಗಳು, ಮೂರು ಚೀನ ಗ್ರೆನೇಡುಗಳು, 464 ಸುತ್ತುಗಳ ಎಕೆ ಮದ್ದುಗುಂಡುಗಳು, ಒಂದು ಎಕೆ ಮ್ಯಾಗಜೀನ್, ಎರಡು ರೇಡಿಯೋ ಸೆಟ್‌ಗಳು, ಮೂರು ಹೆಚ್ಚುವರಿ ಆಂಟೆನಾ, ಎರಡು ಬೈನಾಕ್ಯುಲರ್‌ಗಳು ಮತ್ತು ಒಂದು ಸಂಕೇತ ಹಾಳೆ ಲಭಿಸಿದೆ ಎಂದು 15 ಕಾರ್ಪ್ಸ್‌ನ ಸೇನಾಧಿಕಾರಿ ತಿಳಿಸಿದ್ದಾರೆ. |