ಸಮಾಜವಾದಿ ಪಕ್ಷದ ನಾಯಕರಾದ ಅಮರ್ ಸಿಂಗ್ ಹಾಗೂ ಅಜಂ ಖಾನ್ ಅವರುಗಳ ನಡುವಿವ ಬಿರುಕು ದಿನೇದಿನೇ ಹೆಚ್ಚುತ್ತಿದ್ದು, ಪಕ್ಷವು ಎರಡು ಹೋಳಾಗುವ ಹಂತಕ್ಕೆ ತಲುಪಿದೆ ಎಂದು ಸಮೀಪದ ಮೂಲಗಳು ಹೇಳುತ್ತಿವೆ.
ರಾಮ್‌ಪುರ ಕ್ಷೇತ್ರದಿಂದ ನಟಿ ಜಯಪ್ರದಾ ಅವರನ್ನು ಅಮರ್ ಸಿಂಗ್ ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಈ ನಾಯಕರ ನಡುವೆ ಉಂಟಾಗಿರುವ ಮನಸ್ತಾಪವು, ಸಾರ್ವಜನಿಕವಾಗಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ.
ಅಜಂ ಖಾನ್ ತನ್ನನ್ನು ತಾನು ತಿದ್ದಿಕೊಳ್ಳದಿದ್ದರೆ ತಾನು ಪಕ್ಷ ತೊರೆಯುವುದಾಗಿ ಅಮರ್ ಹೇಳುತ್ತಿದ್ದರೆ, ಸಿಂಗ್ ತನ್ನ ವಿರುದ್ಧ ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ಹೇಳಿತ್ತಾ ಖಾನ್ ತಿರುಗುತ್ತಿದ್ದಾರೆ.
ಸಿಂಗ್-ಖಾನ್ ನಡುವಣ ತಿಕ್ಕಾಟ ಹೊಸದೇನಲ್ಲದಿದ್ದರೂ, ಕಲ್ಯಾಣ್ ಸಿಂಗ್ ಸಮಾಜವಾದಿ ಪಕ್ಷದೊಳಗೆ ಕಾಲಿಟ್ಟಂದಿನಿಂದ ಅದು ಉತ್ತುಂಗಕ್ಕೇರಿದೆ. ಈ ಮಧ್ಯೆ ಅಮರ್ ಸಿಂಗ್ ಬಣದಲ್ಲಿರುವ ಜಯಪ್ರದಾ ಮೇಲೂ ಹರಿಹಾಯುತ್ತಿರುವ ಖಾನ್, ಆಕೆಯೊಬ್ಬ ರಾಜಕಾರಣಿಯಲ್ಲ, ಆಕೆ ಒಬ್ಬ ನೃತ್ಯಗಾತಿ ಎಂದು ಹೇಳಿದ್ದಾರೆ.
ಈ ಇಬ್ಬರ ಜಗಳದಿಂದ ಹೈರಾಣಾಗಿರುವ ಮುಲಾಯಂ ಸಿಂಗ್ ಯಾದವ್ ಅವರು ಸದ್ಯಕ್ಕೆ ಇದನ್ನು ಹಾಗೆಯೇ ಬಿಡಲು ತೀರ್ಮಾನಿಸಿದ್ದು, ಚುನಾವಣೆ ಮುಗಿದ ಬಳಿಕ ಬಗೆ ಹರಿಸೋಣ ಎಂದು ಸುಮ್ಮನಾಗಿದ್ದಾರೆ.
ಸಮಾಜವಾದಿ ಪಕ್ಷದೊಳಗೆ ಯಾರು ಹೆಚ್ಚು ಎಂಬ ಪದವಿಗಾಗಿ ಗುದ್ದಾಟ ನಡೆಯುತ್ತಿದ್ದು, ಅಮರ್ ಸಿಂಗ್ ಅವರ ಪ್ರಭಾವ ಹೆಚ್ಚುತ್ತಿರುವುದನ್ನು ಅರಗಿಸಿಕೊಳ್ಳಲು ಖಾನ್‌ರಂತ ನಾಯಕರಿಗೆ ಕಷ್ಟವಾಗುತ್ತಿದೆ. ಸಮಾಜವಾದಿ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರೆ 'ಸಿಂಗ್ ಈಸ್ ಕಿಂಗ್' ಎಂಬುದನ್ನು ನಿರೂಪಿಸಲು ಅಮರ್ ಸಿಂಗ್ ಪ್ರಯತ್ನಿಸುತ್ತಿರುವುದು ದೊಡ್ಡ ಗುಟ್ಟಲ್ಲ. |