ತಮ್ಮ ತಂದೆ ಸಂಜಯ್ ಗಾಂಧಿ ಪ್ರಣೀತ ವಿವಾದಾತ್ಮಕ ಸಂತಾನಹರಣ ನೀತಿಗೆ ಪುನಶ್ಚೇತನ ನೀಡುವತ್ತ ಚಿತ್ತ ನೆಟ್ಟಿರುವ 29ರ ಹರೆಯದ ಬಿಜೆಪಿ ತರುಣ ಮುಖಂಡ ವರುಣ್ ಗಾಂಧಿ, ಪ್ರತಿಯೊಬ್ಬ ಭಾರತೀಯನಿಗೆ ಮಿಲಿಟರಿ ಸೇವೆ ಕಡ್ಡಾಯ ಮಾಡಬೇಕೆಂಬ ಇರಾದೆ ಹೊಂದಿದ್ದಾರೆ.
ಲಂಡನ್‌ನ ಡೈಲಿ ಟೆಲಿಗ್ರಾಫ್‌ಗೆ ಸಂದರ್ಶನ ನೀಡಿರುವ ವರುಣ್, ಭಾರತವು ಕಳೆದ 20 ವರ್ಷಗಳಿಂದ ನಾಯಕತ್ವದ ಕೊರತೆ ಎದುರಿಸುತ್ತಿದೆ. ಹೀಗಾಗಿ ಪ್ರಬಲ ನಾಯಕತ್ವ ನೀಡುವ ಮೂಲಕ ತಂದೆಯ ಹೆಜ್ಜೆಯಲ್ಲಿ ಮುನ್ನಡೆಯುವ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದಾರೆ.
ರಾಜಕೀಯ ನನ್ನ ಗಮ್ಯಸ್ಥಾನ. ಯಾವುದಾದರೊಂದು ಹಂತದಲ್ಲಿ ಅಧಿಕಾರ ಸಾಧಿಸುವ ಮಹತ್ವಾಕಾಂಕ್ಷೆ ತನಗಿಲ್ಲ ಎನ್ನುವವರು ನನ್ನ ಪ್ರಕಾರ ಸುಳ್ಳು ಹೇಳುತ್ತಿದ್ದಾರೆಂದು ಅರ್ಥ ಎಂದಿದ್ದಾರೆ.
ಸಂತಾನಹರಣ ನೀತಿಗೆ ಪುನಶ್ಚೇತನ ನೀಡುವುದರೊಂದಿಗೆ, ದೇಶವನ್ನು ಒಗ್ಗೂಡಿಸಲು ಹಾಗೂ ಜಾತಿ ಮತ್ತು ಧರ್ಮದ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಮಿಲಿಟರಿ ಸೇವೆ ಕಡ್ಡಾಯ ಮಾಡುವ ಕುರಿತು ಮಸೂದೆ ಮಂಡಿಸುವ ಪ್ರಸ್ತಾಪವನ್ನು ಸಂಸತ್ತಿನ ಮುಂದಿಡುವುದಾಗಿ ತಿಳಿಸಿದ್ದಾರೆ.
ಜನರು 'ನಾನು ಬ್ರಾಹ್ಮಣ', 'ನಾನು ತಮಿಳ' ಎಂಬಿತ್ಯಾದಿಯಾಗಿ ಗುರುತಿಸಿಕೊಳ್ಳುವುದರ ಬದಲು, ಅವರು ತಮ್ಮನ್ನು 'ನಾವು ಭಾರತೀಯರು' ಎಂದು ಮೊದಲು ಗುರುತಿಸುವಂತಾಗಬೇಕು ಎಂದು ನುಡಿದ ವರುಣ್ ಗಾಂಧಿ, ಇತ್ತೀಚೆಗಿನ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನೆಂದಿಗೂ ಮುಸ್ಲಿಮರನ್ನು ಬೆದರಿಸಿಲ್ಲ, ಆದರೆ ಫಿಲಿಬಿಟ್‌ನಲ್ಲಿ ಮೂವರು ಸ್ಥಳೀಯರ ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಹಿನ್ನೆಲೆಯಲ್ಲಿ 'ಸಮಾಜಘಾತುಕ' ಶಕ್ತಿಗಳಿಂದ ಜನರನ್ನು ರಕ್ಷಿಸಲು ಪಣ ತೊಟ್ಟಿದ್ದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. |