ಮಾಧ್ಯಮ ಮುಖ್ಯಸ್ಥ ಹುದ್ದೆಯಿಂದ ತನ್ನನ್ನು ವಜಾ ಮಾಡಿಲ್ಲ ಎಂದು ಹೇಳಿರುವ ವೀರಪ್ಪ ಮೊಯ್ಲಿ, ಇದೊಂದು ಪಕ್ಷದ ಆಂತರಿಕ ಬದಲಾವಣೆ ಅಷ್ಟೆ ಎಂದು ಹೇಳಿದ್ದಾರೆ.
"ಈ ಕುರಿತು ತಾನಿನ್ನೂ ಯಾವುದೇ ಪತ್ರ ಪಡೆದಿಲ್ಲ" ಎಂಬುದಾಗಿ ಮೊಯ್ಲಿ ನುಡಿದರು. ಬಿಹಾರದ ನಿತೀಶ್ ಕುಮಾರ್ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ಅವರನ್ನು ಮಾಧ್ಯಮ ಮುಖ್ಯಸ್ಥ ಸ್ಥಾನದಿಂದ ಕಾಂಗ್ರೆಸ್ ಹೈಕಮಾಂಡ್ ವಜಾ ಮಾಡಿದೆ ಎಂದು ಸುದ್ದಿಯಾಗಿತ್ತು.
ಚುನಾವಣೆ ಬಳಿಕ ಅವರು ಏನುಮಾಡುತ್ತಾರೆಂಬುದು ತನಗೆ ತಿಳಿದಿಲ್ಲ ಎಂದು ಚಿಕ್ಕಬಳ್ಳಾಪುದಿಂದ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿರುವ ಅವರು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತಾಡುತ್ತಾ ನುಡಿದರು.
ಮಾಧ್ಯಮ ಮುಖ್ಯಸ್ಥ ಸ್ಥಾನದಿಂದ ತೆಗೆದು ಹಾಕಿರುವುದಕ್ಕೆ ಪ್ರತಿಕ್ರಿಯೆ ಕೇಳಿದಾಗ, ಮೊದಲಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಅಭ್ಯರ್ಥಿಯೊಬ್ಬ ಚುನಾವಣೆಯಲ್ಲಿ ಸ್ಫರ್ಧಿಸಿದಾಗ ಕಾಂಗ್ರೆಸ್ ಕೈಗೊಳ್ಳುವ ಆಂತರಿಕ ಕ್ರಮ ಇದಾಗಿದೆ ಎಂದು ನುಡಿದರು.
ತನ್ನನ್ನು ವಜಾ ಮಾಡಿರುವುದಾಗಿ ಹರಡಿರುವ ಸುದ್ದಿಯು ಯಾರೋ ಹುಟ್ಟುಹಾಕಿರುವ ಕುಚೋದ್ಯದ ಕ್ರಮವಾಗಿದೆ ಎಂದು ಹೇಳಿದರು.
ಮಾಧ್ಯಮ ಮುಖ್ಯಸ್ಥನ ಸ್ಥಾನಕ್ಕೆ ಜನಾರ್ದನ ದ್ವಿವೇದಿಯವರನ್ನು ತಾತ್ಕಾಲಿಕವಾಗಿ ನೇಮಿಸಿರುವ ಆದೇಶವನ್ನು ಮಾರ್ಚ್ 31ರಂದು ನೀಡಲಾಗಿತ್ತು. ನಾನು ಚಿಕ್ಕಬಳ್ಳಾಪುರ ಅಭ್ಯರ್ಥಿಯಾಗಿರುವ ಕಾರಣ ಮಾಧ್ಯಮ ವಿಭಾಗಕ್ಕೆ ಯಾರನ್ನಾದರೂ ನೇಮಿಸಲೇ ಬೇಕಾಗುತ್ತದೆ ಎಂದು ಅವರು ತಿಳಿಸಿದರು. |