ಪಶ್ಚಿಮ ಬಂಗಾಳದ 15 ಮತಗಟ್ಟೆಗಳು, ಬಿಹಾರದ ಆರು ಮತ್ತು ರಾಜಸ್ತಾನದ 60 ಮತಗಟ್ಟೆಗಳಲ್ಲಿ ಭಾನುವಾರ ಬಿಗಿ ಭದ್ರತೆಯ ನಡುವೆ ಮರುಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಮರುಮತದಾನ ಆರಂಭವಾಗಿದ್ದು, ಶಾಂತಿಯುತವಾಗಿ ಮತದಾನ ನಡೆದಿದೆಯೆಂದು ವರದಿಯಾಗಿದೆ.
ಪಶ್ಚಿಮಬಂಗಾಳದ 15 ಮತಗಟ್ಟೆಗಳಲ್ಲಿ ಜಂಗಿಪುರದ ಎರಡು ಸ್ಥಾನಗಳಿಗೆ ಮತದಾನ ಒಳಗೊಂಡಿದ್ದು, ಅಲ್ಲಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಕಣಕ್ಕಿಳಿದಿದ್ದಾರೆ. 9 ಮತಗಟ್ಟೆಗಳಲ್ಲಿ ಹೌರಾ ಮತ್ತು ಉಲುಬೇರಿಯ ಸ್ಥಾನಗಳ ಆಯ್ಕೆಗೆ ಮತದಾನ ನಡೆಯುತ್ತಿದ್ದು, ಒಂದರಲ್ಲಿ ಹೂಗ್ಲಿಯ ಸ್ಥಾನಕ್ಕೆ ಮತ್ತು ಮೂರು ಮತಗಟ್ಟೆಗಳಲ್ಲಿ ಬೂರ್ದ್ವಾನ್ ಪೂರ್ವ ಮತ್ತು ಅಸಾನಲ್ ಕ್ಷೇತ್ರಗಳಿಗೆ ಮರುಚುನಾವಣೆ ನಡೆಯಲಿದೆ.
ಮೇ 7ರಂದು 2ನೇ ಹಂತದ ಚುನಾವಣೆಯಲ್ಲಿ ಹಿಂಸಾಚಾರ ಮತ್ತು ವಿದ್ಯುನ್ಮಾನ ಮತಯಂತ್ರಗಳ ದೋಷ ಮತ್ತಿತರ ಕಾರಣಗಳಿಂದ ಚುನಾವಣೆ ಆಯೋಗವು ಮರುಚುನಾವಣೆಗೆ ಆದೇಶ ನೀಡಿದೆ. ಅಂದು ನಾಲ್ಕು ಮತಗಟ್ಟೆಗಳಲ್ಲಿ ಮತಯಂತ್ರಗಳನ್ನು ದುಷ್ಕರ್ಮಿಗಳು ಪುಡಿಗಟ್ಟಿದರು. ಒಂದು ಮತಗಟ್ಟೆಯಲ್ಲಿ ಹಿಂಸಾಚಾರದಿಂದ ಮತದಾನ ಎರಡು ಗಂಟೆಗಳ ಕಾಲ ನಿಲ್ಲಿಸಲಾಗಿತ್ತೆಂದು ಮುಖ್ಯ ಚುನಾವಣೆ ಅಧಿಕಾರಿ ದೇವಶಿಶ್ ಸೇನ್ ಹೇಳಿದ್ದಾರೆ.ಬಿಹಾರದಲ್ಲಿ ಪಾಟಲಿಪುತ್ರ ಲೋಕಸಭೆ ಸ್ಥಾನದ ಐದು ಮತಗಟ್ಟೆಗಳಲ್ಲಿ ಮರುಮತದಾನ ನಡೆಯುತ್ತಿದೆ. ಅಲ್ಲಿ ಆರ್‌ಜೆಡಿ ಮುಖಂಡ ಮತ್ತು ಕೇಂದ್ರಸಚಿವ ಲಾಲು ಪ್ರಸಾದ್ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
|