ನವೆಂಬರ್ 26ರ ಭಯೋತ್ಪಾದನೆ ದಾಳಿಯಲ್ಲಿ ಸಿಕ್ಕಿಬಿದ್ದ ಏಕೈಕ ಭಯೋತ್ಪಾದಕ ಅಜ್ಮಲ್ ಅಮಿರ್ ಕಸಾಬ್ ವಿಚಾರಣೆಯಿಂದ ಭಯೋತ್ಪಾದನೆ ದಾಳಿಗಳಿಗೆ ಅಪ್ರಾಪ್ತರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ. ಇಂತಹ ಸನ್ನಿಹಿತ ಪಿಡುಗನ್ನು ನಿಭಾಯಿಸಲು ಬಾಲಾಪರಾಧ ಕಾಯಿದೆಯನ್ನು ಬಲಪಡಿಸುವ ಅಗತ್ಯವಿದೆಯೆಂದು ವಿಶೇಷ ಸಾರ್ವಜನಿಕ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ತಿಳಿಸಿದ್ದಾರೆ.
ತಾನು ಅಪ್ರಾಪ್ತ ವಯಸ್ಕನೆಂದು ನಿರೂಪಿಸಲು ವಿಫಲ ಪ್ರಯತ್ನವನ್ನು ಕಸಾಬ್ ನಡೆಸಿದ್ದರಿಂದ, ಆತ್ಮಾಹುತಿ ದಾಳಿಗಳನ್ನು ನಡೆಸಲು ಭಯೋತ್ಪಾದಕ ಗುಂಪುಗಳು ಅಪ್ರಾಪ್ತರನ್ನು ಬಳಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆಯೆಂದು ಅವರು ಎಚ್ಚರಿಸಿದ್ದಾರೆ. ಬಾಲಾಪರಾಧಿಗಳು ದೇಶದೊಳಕ್ಕೆ ನುಸುಳುವ ಸಂಭವವಿದೆ.
18ವರ್ಷ ಕೆಳಗಿನ ವಯೋಮಾನದ ಭಯೋತ್ಪಾದಕ ಶಂಕಿತರನ್ನು ಕಠಿಣ ಕಾನೂನುಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಬಾಲಾಪರಾಧ ಕಾಯಿದೆಗೆ ಬದಲಾವಣೆ ಮಾಡುವುದನ್ನು ಖಾತರಿಪಡಿಸಬೇಕಿದೆ ಎಂದು ಪತ್ರಕರ್ತರ ಜತೆ ಸಂವಾದದಲ್ಲಿ ನಿಕಮ್ ಹೇಳಿದರು.
ಇತ್ತೀಚೆಗೆ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ಮಾಡಿ ಬಾಲಪರಾಧಿಯ ವಯೋಮಿತಿಯನ್ನು 16ರಿಂದ 18ಕ್ಕೆ ಹೆಚ್ಚಿಸಲಾಯಿತು. ಆದರೆ ಬಾಲಾಪರಾಧಿಗೆ ಭಯೋತ್ಪಾದನೆ ಪ್ರಕರಣದಲ್ಲಿ ಮರಣದಂಡನೆ ಮುಂತಾದ ಕಠಿಣಶಿಕ್ಷೆಗೆ ಗುರಿಪಡಿಸಲು ಕಾಯಿದೆಯಲ್ಲಿ ಅವಕಾಶವಿಲ್ಲ ಎಂದು ನಿಕಮ್ ಹೇಳಿದರು.
ನಿಯಮಿತ ಕೋರ್ಟ್‌ನಲ್ಲಿ ಬಾಲಾಪರಾಧಿಯನ್ನು ವಿಚಾರಣೆಗೆ ಗುರಿಪಡಿಸದೇ ಬಾಲಪರಾಧದ ಕೋರ್ಟ್‌ನಲ್ಲಿ ಮಾತ್ರ ವಿಚಾರಣೆಗೆ ಗುರಿಯಾಗಬೇಕಿದ್ದು, ಆರೋಪಿ ತಪ್ಪಿತಸ್ಥನೆನೆಂದು ಸಾಬೀತಾದರೂ ಶಿಕ್ಷೆ ವಿಧಿಸುವಂತಿಲ್ಲ ಎಂದು ನಿಕಂ ಹೇಳಿದರು.
ಕಾಯ್ದೆಯ ಮೃದುತ್ವದ ಅನುಕೂಲ ಪಡೆದು ಬಾಲಾಪರಾಧಿಯೆಂದು ಕಸಾಬ್ ರುಜುವಾತು ಮಾಡಲು ಪ್ರಯತ್ನಿಸಿದಂತೆ ಅನೇಕ ಅಪ್ರಾಪ್ತ ಬಾಲಕರ ತಲೆಕೆಡಿಸಿ ಭಯೋತ್ಪಾದಕ ಗುಂಪುಗಳು ಬಳಸಿಕೊಳ್ಳಬಹುದೆಂದು ನಿಕಮ್ ಶಂಕೆ ವ್ಯಕ್ತಪಡಿಸಿದರು.
|