ಸಂಜಯ್ ಗಾಂಧಿಯವರು ಅನುಸರಿಸಿದ್ದ ಸಂತಾನಹರಣ ಶಸ್ತ್ರಚಿಕಿತ್ಸೆ ಕ್ರಮಗಳತ್ತ ಮಗ ವರುಣ್ ಗಾಂಧಿ ಆಸಕ್ತರಾಗಿದ್ದಾರೆಂದು ವರದಿ ಮಾಡಿ ವಿವಾದದ ಕಿಡಿ ಸ್ಫೋಟಿಸಿದ್ದ ಬ್ರಿಟನ್ ದಿನಪತ್ರಿಕೆ 'ಡೈಲಿ ಟೆಲಿಗ್ರಾಫ್', ಕುಟುಂಬ ಯೋಜನೆಯಲ್ಲಿ ವರುಣ್ ಮೃದು ಧೋರಣೆಗೆ ಒಲವು ತೋರಿದ್ದಾರೆಂದು ಸ್ಪಷ್ಟೀಕರಣ ಪ್ರಕಟಿಸಿದೆ.
ಪಿಲಿಬಿಟ್ ಲೋಕಸಭೆ ಕ್ಷೇತ್ರದಲ್ಲಿ ವರುಣ್ ಅವರನ್ನು ಪತ್ರಿಕೆಯ ದಕ್ಷಿಣ ಏಷ್ಯಾ ಸಂಪಾದಕ ಡೀನ್ ನೆಲ್ಸನ್ ಸಂದರ್ಶನ ಮಾಡಿದ್ದ ಸಂದರ್ಭದಲ್ಲಿ, ತಾವು ತಮ್ಮ ತಂದೆಯವರ ಜನಸಂಖ್ಯೆ ನಿಯಂತ್ರಣ ನೀತಿಯನ್ನು ಕೈಗೆತ್ತಿಕೊಳ್ಳುವುದಾಗಿ ವರುಣ್ ತಿಳಿಸಿದ್ದು, ಮುಂಚಿನ ನೀತಿಯನ್ನು ಒರಟು ರೀತಿಯಲ್ಲಿ ಕೈಗೊಂಡಿದ್ದನ್ನು ಒಪ್ಪಿಕೊಂಡಿದ್ದಾರೆಂದು ನೆಲ್ಸನ್ ತಿಳಿಸಿದ್ದರು.
ಸಣ್ಣ ಕುಟುಂಬ ಹೊಂದುವವರಿಗೆ ಆರ್ಥಿಕ ಅನುಕೂಲ ಕಲ್ಪಿಸುವ ಮೂಲಕ ಸಕಾರಾತ್ಮಕ ರಿಯಾಯಿತಿಗಳಿಗೆ ವರುಣ್ ಒಲವು ತೋರಿದ್ದಾರೆಂದು ನೆಲ್ಸನ್ ಬಳಿಕ ಸ್ಪಷ್ಟನೆ ನೀಡಿದ್ದಾರೆ.
ಆಗಿನ ಸಂದರ್ಭದಲ್ಲಿ ಸರ್ಕಾರ ಬಳಸಿದ ವಿಧಾನ ಒರಟಾಗಿತ್ತೆಂದು ಮತ್ತು ಅನೇಕ ಮಂದಿ ಅದನ್ನು ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆಗಳೆಂದು ಅಭಿಪ್ರಾಯಪಟ್ಟಿದ್ದಾಗಿ ವರುಣ್ ಹೇಳಿದ್ದರೆಂಬ ಮುಂಚಿನ ವರದಿಯನ್ನು ಸುದ್ದಿಪತ್ರಿಕೆಯು ತಿದ್ದುಪಡಿ ಮಾಡಿ, ಭಾರತದ ಜನಸಂಖ್ಯೆಯ ನಿಯಂತ್ರಣಕ್ಕೆ ತುರ್ತು ಕ್ರಮ ಅಗತ್ಯವಿದೆಯೆಂದು ವರುಣ್ ನಂಬಿದ್ದಾರೆಂದು ತಿಳಿಸಿದೆ.
|