ಇಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಮಹಾ ರ‌್ಯಾಲಿಯಲ್ಲಿ ಎಲ್ಲಾ ಮಿತ್ರಪಕ್ಷಗಳು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು. ಕೊನೆಯ ಹಂತದ ಮತದಾನಕ್ಕೆ ಕೇವಲ ಮೂರು ದಿನ ಇರುವಾಗ ನಡೆದ ಈ ಮಹಾ ಸಮಾವೇಶದಲ್ಲಿ ಟಿಆರ್ಎಸ್ ಪಕ್ಷವು ಮೈತ್ರಿ ಕೂಟಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡಿತು. ಅಲ್ಲದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳಲಾರೆ ಎಂದು ಹೇಳಿದ್ದ ಬಿಹಾರ ಮುಖ್ಯಮಂತ್ರಿ ಜೆಡಿಯು ನಾಯಕ ನಿತೀಶ್ ಕುಮಾರ್, ಆ ಮಾತನ್ನು ಸುಳ್ಳಾಗಿಸಿ ಮೋದಿ ಜತೆಯಲ್ಲೇ ವೇದಿಕೆಯ ಮೊದಲಿನ ಸಾಲಿನಲ್ಲಿ ಸಮಾರಂಭದಿಂದ ಆರಂಭದಿಂದ ಕೊನೆಯ ತನಕ ಕುಳಿತಿದ್ದರು. ತೃತೀಯ ರಂಗದಲ್ಲಿ ಗುರುತಿಸಿಕೊಂಡು ಆಂಧ್ರದಲ್ಲಿ ತೃತೀಯ ರಂಗದೊಂದಿಗೆ ಮತಯಾಚಿಸಿದ್ದ ಟಿಆರ್ಎಸ್ ಮುಖ್ಯಸ್ಥ ಚಂದ್ರಶೇಖರ್ ರಾವ್ 'ಎಡ'ದಿಂದ 'ಬಲ'ಕ್ಕೆ ಹೊರಳಿದ್ದಾರೆ.ಹನ್ನೊಂದು ವರ್ಷಗಳ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮತ್ತು ಅಸಾಮಾನ್ಯ ಸಮಾವೇಶ ಎಂದು ಬಣ್ಣಿಸಿದ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ದೇಶ ಆಳುವ ಸಾಮರ್ಥ್ಯವು ಎನ್‌ಡಿಎಗೆ ಮಾತ್ರ ಇದೆ ಎಂಬ ಜನಸಾಮಾನ್ಯರ ನಂಬಿಕೆ ಗಟ್ಟಿಗೊಳಿಸುವ ಸಂದೇಶವನ್ನು ಈ ಸಮಾವೇಶ ರಾಷ್ಟ್ರದ್ಯಂತ ಹಬ್ಬಲಿದೆ ಎಂದು ನುಡಿದರು.ಎಡಪಕ್ಷಗಳ ಆಘಾತ: ತೃತೀಯ ರಂಗದ ಅಂಗಪಕ್ಷವಾಗಿದ್ದ ಟಿಆರ್ಎಸ್ ಎನ್‌ಡಿಎ ಸೇರಿರುವುದಕ್ಕೆ ಎಡಪಕ್ಷಗಳು ಆಘಾತ ವ್ಯಕ್ತಪಡಿಸಿವೆ. ಇದನ್ನೊಂದು ದುರದೃಷ್ಟಕರ ಬೆಳವಣಿಗೆ ಎಂದಿರುವ ಅದು, ಜಾತ್ಯತೀತ ಪಕ್ಷಗಳಿಗೆ ಮತ್ತು ತೆಲಂಗಾಣದ ಜನತೆಗೆ ಎಸಗಿದ ವಂಚನೆ ಎಂದು ದೂಷಿಸಿದೆ.ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್, ಜೆಡಿಯು ಮುಖಂಡ ಶರದ್ ಯಾದವ್, ಆರ್ಎಲ್‌ಡಿಯ ಅಜಿತ್ ಸಿಂಗ್, ಐಎನ್ಎಲ್‌ಡಿ ಓಂ ಪ್ರಕಾಶ್ ಚೌತಾಲ, ಶಿವಸೇನೆಯ ಮನೋಹರ್ ಜೋಷಿಸ ಶಿರೋಮಣಿ ಅಕಾಲಿದಳದ ಸುಖ್‍ಬೀಕ್ ಸಿಂಗ್ ಬಾದಲ್ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿಂದಂತೆ ಎನ್‌ಡಿಎ ಮಿತ್ರ ಕೂಟದ ಪ್ರಮುಖರು ಸಮಾರಂಭದಲ್ಲಿ ಹಾಜರಿದ್ದರು. |