ಸರ್ಕಾರಿ ಉದ್ಯೋಗಿಯೊಬ್ಬ ತನ್ನ ಸೇವಾವಧಿಯಲ್ಲಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಸಂಶಯ ಉದ್ಭವವಾದರೆ, ನಿವೃತ್ತಿ ಬಳಿಕವೂ ಆತನ ವಿರುದ್ಧ ಇಲಾಖಾ ತನಿಖೆ ನಡೆಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಎಚ್.ಎಲ್. ದತ್ತು ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.ಯಾವುದೇ ಸರ್ಕಾರಿ ನೌಕರ ತನ್ನ ಸೇವಾವಧಿಯಲ್ಲಿ ಲೋಪವೆಸಗಿದ್ದರೆ, 1971ರ ಸೇವಾ ನಿಯಮ 10(1)ರ ಪ್ರಕಾರ ಆತನ ನಿವೃತ್ತಿ ನಂತರವೂ ತನಿಖೆ ಮುಂದುವರಿಸಬಹುದು ಎಂದು ನ್ಯಾಯಪೀಠ ಹೇಳಿದೆ.ಪಶ್ಚಿಮ ಬಂಗಾಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನಿವೃತ್ತ ಸರ್ಕಾರಿ ನೌಕರರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಇದಲ್ಲದೆ, ತಪ್ಪು ಸಾಬೀತಾದರೆ ನಿವೃತ್ತಿ ವೇತನ ಸೌಲಭ್ಯವನ್ನೂ ಕಡಿತಗೊಳಿಸಬಹುದು ಎಂದೂ ಸುಪ್ರೀಂಕೋರ್ಟ್ ಸೂಚಿಸಿದೆ. |