ತನ್ನ ಘನತೆಗೆ ಧಕ್ಕೆಯುಂಟುಮಾಡುವಂತಹ ವಸ್ತುಗಳನ್ನು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ವಿತರಿಸುತ್ತಿದ್ದಾರೆ ಎಂದು ಆಪಾದಿಸಿರುವ ಪಕ್ಷದ ರಾಂಪುರ ಕ್ಷೇತ್ರದ ಅಭ್ಯರ್ಥಿ ಜಯಪ್ರದ, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.
"ಅಜಂ ಖಾನ್ ತನ್ನ ಹಿರಿಯಣ್ಣನಿದ್ದಂತೆ. ಆದರೆ ಅವರು ನನ್ನ ವಿರುದ್ಧ ಅಗ್ಗದ ಪ್ರಚಾರ ಮಾಡುತ್ತಿದ್ದು, ನನ್ನ ಘನತೆಗೆ ಭಂಗ ಉಂಟುಮಾಡಿದ್ದಾರೆ. ಅವರ ಈ ನಡತೆಯು ಮಹಿಳಾ ಕುಲಕ್ಕೇ ಅವಮಾನವೆಸಗುವಂತದ್ದು" ಎಂಬುದಾಗಿ ರಾಜಕಾರಣಿಯಾಗಿರುವ ನಟಿ ಜಯಪ್ರದಾ ಖಾಸಗಿ ವಾಹಿನಿಯೊಂದರ ಜತೆ ಮಾಡನಾಡುತ್ತಾ ಹೇಳಿದ್ದಾರೆ.
ರಾಂಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಜಯಪ್ರದಾ, "ಅವರು (ಖಾನ್ ಮತ್ತು ಅವರ ಬೆಂಬಲಿಗರು) ನನಗೆ ಅವಮಾನವಾಗುವಂತಹ ಸಿಡಿಗಳು ಮತ್ತು ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ" ಎಂದು ಜಯಪ್ರದಾ ದೂರಿದ್ದಾರೆ.
"ಸಿಡಿಯೊಳಗೆ ಏನಿದೆ ಎಂಬುದನ್ನು ನಾನು ಇನ್ನಷ್ಟೆ ನೋಡಬೇಕಿದೆ. ಆದರೆ ಅವರು ಬಿಡುಗಡೆ ಮಾಡಿರುವ ಭಿತ್ತಿಚಿತ್ರಗಳು ತುಂಬ ಕಳಪೆ ಅಭಿರುಚಿಯದಾಗಿದ್ದು, ನನ್ನ ಪ್ರತಿಷ್ಠೆಗೆ ಹಾನಿಯುಂಟು ಮಾಡುತ್ತದೆ. ಈ ತರಹದ ಪ್ರಚಾರಕ್ಕೆ ತಡೆ ಹೇರಲು ನಾನು ಚುನಾವಣಾ ಆಯೋಗವನ್ನು ಸಂಪರ್ಕಿಸುತ್ತೇನೆ" ಎಂಬುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಈ ಕುರಿತು ಇದೀಗಾಗಲೇ ಪೊಲೀಸರನ್ನು ಸಂಪರ್ಕಿಸುವುದಾಗಿಯೂ ಅವರು ತಿಳಿಸಿದ್ದಾರೆ. |