ಮತದಾರರು ಅಂದುಕೊಂಡಂತೆಯೇ ಆಗುತ್ತಿದೆ. ಚುನಾವಣೋತ್ತರ ಕಾಲದಲ್ಲಿ ಫಲಿತಾಂಶಗಳು ಯಾರ ಪರವಾಗಿಯೂ ನಿಖರವಾಗಿ ಮೂಡಿಬರಲಾರದು ಎಂಬ ಶಂಕೆಗಳ ನಡುವೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪರಸ್ಪರರತ್ತ ಕಣ್ಣು ಮಿಟುಕಿಸತೊಡಗಿದ್ದು, ಕಾಂಗ್ರೆಸ್ ನಮಗೆ ಅಸ್ಪೃಶ್ಯವಲ್ಲ ಎಂದು ಎಡರಂಗ ಹೇಳಿದ್ದರೆ, ಎನ್‌ಡಿಎಯನ್ನು ಅಧಿಕಾರದಿಂದ ದೂರವಿಡಲು ಎಡಪಕ್ಷಗಳು ಅತ್ಯಗತ್ಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಕೂಡ ಹೇಳಿದ್ದಾರೆ.
ಲೂಧಿಯಾನಾದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಯುಪಿಎ ಸರಕಾರ ಬೆಂಬಲಿಸಲು ಎಡಪಕ್ಷಗಳಿಗೆ ಮನವಿ ಮಾಡುವಿರೇ ಎಂದು ಕೇಳಿದಾಗ ಉತ್ತರಿಸಿದ ಪ್ರಧಾನಿ ಸಿಂಗ್, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೇರದಂತೆ ಹೇಗಾದರೂ ತಡೆಯಲು ಮತ್ತು 'ಜಾತ್ಯತೀತ' ಸರಕಾರ ಸ್ಥಾಪನೆಯಾಗಲು ಎಲ್ಲ ಜಾತ್ಯತೀತ ಪಕ್ಷಗಳಿಗೆ ಬದ್ಧತೆಯಿದೆ ಎಂದು ಹೇಳಿದ್ದಾರೆ.
'ಅಸಮಾಧಾನ'ಗೊಂಡಿರುವ ಯುಪಿಎಯ ಮಿತ್ರರನ್ನು ಸಮಾಧಾನಗೊಳಿಸಲಾಗುತ್ತದೆ ಎಂದ ಪ್ರಧಾನಿ, ಆದರೆ ಎಡಪಕ್ಷಗಳ ನೇತೃತ್ವದಲ್ಲಿ ಸರಕಾರ ರಚನೆಯಾದಲ್ಲಿ ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಡಪಕ್ಷಗಳು ಮತ್ತು ಕಾಂಗ್ರೆಸ್ ನಡುವೆ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವು ತಡೆಗೋಡೆಯಾಗುವುದೇ ಎಂದು ಕೇಳಿದಾಗ, ಅದು ಈಗ ವಿವಾದವಾಗಿ ಉಳಿದಿಲ್ಲ. ಅದಕ್ಕೆ ಸಹಿ ಹಾಕಲಾಗಿದೆ, ಮುದ್ರೆ ಹಾಕಲಾಗಿದೆ ಮತ್ತು ಅನುಷ್ಠಾನಕ್ಕೂ ಬಂದಿದೆ ಎಂದರು.
ಕಾಂಗ್ರೆಸ್ ಅಸ್ಪೃಶ್ಯವಲ್ಲ: ಬುದ್ಧದೇವ್ ಇದಕ್ಕೆ ಮೊದಲು, ಎಡರಂಗವು ಕಾಂಗ್ರೆಸ್‌ನತ್ತ ಮಗ್ಗುಲು ಬದಲಾಯಿಸಿತ್ತು. "ಕಾಂಗ್ರೆಸ್ ನಮಗೆ ಅಸ್ಪೃಶ್ಯವೇನೂ ಅಲ್ಲ". ಆದರೂ ತೃತೀಯ ರಂಗ ಸರಕಾರ ಸ್ಥಾಪನೆಗೆ ಕಠಿಣ ಪರಿಶ್ರಮ ಪಡಲಿದ್ದೇವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರು ಸೋಮವಾರ ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಬೆಂಬಲಿಸುವ ಕುರಿತಾದ ಪ್ರಶ್ನೆಗೆ ನೇರವಾಗಿ ಉತ್ತರಿಸಲು ನುಣುಚಿಕೊಂಡ ಅವರು, ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಲು ಇದು ಸಕಾಲವಲ್ಲ. ಸದ್ಯಕ್ಕೆ ನಾವು ಕಾಂಗ್ರೆಸ್ ಮತ್ತು ಬಿಜೆಪಿಗಳಿಲ್ಲದ ಸರಕಾರ ಸ್ಥಾಪನೆಯತ್ತ ಗಮನ ಹರಿಸಿದ್ದೇವೆ ಎಂದರು.
ಸಮಾನ ಮನಸ್ಕ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳೊಂದಿಗೆ ಸೇರಿಕೊಂಡು ತೃತೀಯ ರಂಗ ಸರಕಾರ ರಚನೆಯತ್ತ ದೃಷ್ಟಿ ನೆಟ್ಟಿದ್ದೇವೆ ಎಂದು ತಿಳಿಸಿದ ಅವರು, ಇದರಲ್ಲಿ ಎಡರಂಗವು ಅರ್ಥಗರ್ಭಿತ ಪಾತ್ರ ವಹಿಸಲಿದೆ ಎಂದು ಸ್ಪಷ್ಟಪಡಿಸಿದರು. |