ಅಂತಿಮ ಹಂತದ ಮತದಾನಕ್ಕೆ ಮುನ್ನ ಬೆಲೆ ಏರಿಕೆ ವಿಷಯ ಮುಂದಿಟ್ಟು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಮೇಲೆ ವಾಗ್ದಾಳಿ ನಡೆಸಿದ ಬಿಜೆಪಿ, ಯುಪಿಎ ಆಡಳಿತಾವಧಿಯಲ್ಲಿ ಆವಶ್ಯಕ ವಸ್ತುಗಳ ಬೆಲೆಯು ಮೂರು ಪಟ್ಟು ಹೆಚ್ಚಾಗಿದೆ. ಯುಪಿಎ ಮರಳಿ ಅಧಿಕಾರಕ್ಕೆ ಬಂದರೆ ಜನಸಾಮಾನ್ಯನಿಗೆ ಈ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ಮುಖ್ತಾರ್ ಅಬ್ಬಾಸ್ ನಖ್ವಿ ಪರವಾಗಿ ಪ್ರಚಾರ ಕಾರ್ಯಕ್ಕೆ ಆಗಮಿಸಿದ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಯುಪಿಎ ಸರಕಾರಕ್ಕೆ ದಲಿತರ ಬಗ್ಗೆ ಕನಿಷ್ಠ ಕಾಳಜಿಯಷ್ಟೇ ಇತ್ತು ಎಂದು ಹೇಳಿದರು.
ದಲಿತರ ಮನೆಗೆ ಭೇಟಿ ನೀಡುವ ಅಭ್ಯಾಸ ಇಟ್ಟುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧವೂ ಕೆಂಡ ಕಾರಿದ ಸುಷ್ಮಾ, ರಾತ್ರಿ ಅವರು ದಲಿತರ ಮನೆಯಲ್ಲಿ ಕಳೆದರೂ, ಬಳಿಕ ಅವರ ಮರಳುವುದು ಹವಾನಿಯಂತ್ರಿತ ಕೊಠಡಿಗೇ ಎಂದು ಟೀಕಿಸಿದರು.
ಅವರಿಗೆ ದಲಿತರ ಕಲ್ಯಾಣ ಬೇಕಿಲ್ಲ, ಓಟು ಮಾತ್ರ ಬೇಕಾಗಿದೆ ಎಂದ ಸುಷ್ಮಾ, ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಬದ್ಧರಾಗುವಂತೆ ಬುದ್ಧಿಜೀವಿಗಳಿಗೆ ಕರೆ ನೀಡಿದರು. |