ಪಕ್ಷದ ಅಜಮ್ ಖಾನ್ ಜತೆಗೆ ಕಹಿಯನ್ನು ಅನುಭವಿಸಿದ ಮೇಲೆ, ಸಮಾಜವಾದಿ ಧುರೀಣ ಅಮರ್ ಸಿಂಗ್ ಈ ಲೋಕಸಭಾ ಚುನಾವಣೆಯ ನಂತರ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ. ಆರೋಗ್ಯ ಹದಗೆಟ್ಟಿರುವ ಕಾರಣ ಇನ್ನು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮರ್ ಸಿಂಗ್ ಘೋಷಿಸಿದ್ದಾರೆ.ಘಾರ್ ಮುಕ್ತೇಶ್ವರ್‌ದಲ್ಲಿ ಪಕ್ಷದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮರ್ ಸಿಂಗ್, ನನ್ನ ಕಿಡ್ನಿಗಳಿಗೆ ತೊಂದರೆಯಾಗಿದೆ. ನನು ಈಗಷ್ಟೇ ಆಸ್ಪತ್ರೆಯಿಂದ ಮರಳಿದ್ದೇನೆ. ಪಕ್ಷದ ಮುಖ್ಯಸ್ಥರ ಆದೇಶದ ಮೇರೆಗೆ ಆರೋಗ್ಯ ಹದಗೆಟ್ಟಿದ್ದರೂ ನಾನು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಾಯಿತು. ನನಗೀಗ ನನ್ನ ಕುಟುಂಬದ ಜತೆಗೆ ಕಳೆಯಬೇಕೆಂದು ಆಸೆಯಾಗುತ್ತಿದೆ. ಹಾಗಾಗಿ ಈ ಲೋಕಸಭಾ ಚುನಾವಣೆ ಮುಗಿದ ಮೇಲೆ (ಮೇ 13) ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆದು, ಖಾಸಗಿ ಜೀವನಕ್ಕೆ ಮರಳಲಿದ್ದೇನೆ. ಹೆಂಡತಿ ಹಾಗೂ ಕುಟುಂಬದ ಜತೆಗೆ ಪ್ರಶಾಂತವಾಗಿ ಜೀವಿಸಲು ನಿಶ್ಚಯಿಸಿದ್ದೇನೆ ಎಂದು ಅಮರ್ ಸಿಂಗ್ ಹೇಳಿದರು.53 ರ ಹರೆಯದ ಅಮರ್ ಸಿಂಗ್ ಉತ್ತರಾಖಂಡ್‍ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದ ವೇಳೆ ಅಸೌಖ್ಯದ ಕಾರಣದಿಂದ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗೂ ಸೋಮವಾರವಷ್ಟೆ ಆಸ್ಪತ್ರೆಯಿಂದ ಮರಳಿದ್ದರು.ಪಕ್ಷದ ಸಹವರ್ತಿ ಅಜಮ್ ಖಾನ್ ಅವರಿಂದ ತನ್ನ ಮನಸ್ಸು ಅಸ್ತವ್ಯಸ್ತಗೊಂಡಿದೆ ಎಂದು ಹೇಳಿದ ಅಮರ್ ಸಿಂಗ್, ನನಗೆ ನೆಮ್ಮದಿಯ ಜೀವನ ಬೇಕು. ಇನ್ನು ನಾನು ಕೇವಲ ಸಂತಸದಾಯಕ ಆರಾಮದ ಜೀವನ ನಡೆಸಲು ಬಯಸುತ್ತೇನೆ ಎಂದರು.ಈ ಹಿಂದೆ ರಾಮಪುರ ಕ್ಷೇತ್ರದಿಂದ ನಟಿ ಜಯಪ್ರದಾರನ್ನು ಕಣಕ್ಕಿಳಿಸಿರುವ ವಿಚಾರವಾಗಿ ಅಜಮ್ ಖಾನ್ ಹಾಗೂ ಅಮರ್ ಸಿಂಗ್ ನಡುವಿನ ವೈಮನಸ್ಸು ಭುಗಿಲೆದ್ದಿತ್ತು. |