ಪ್ರಜಾ ರಾಜ್ಯಂ ಮೂಲಕ ರಾಜಕೀಯ ರಂಗದಲ್ಲಿ ಮಿಂಚಲು ಹೊರಟಿರುವ ಮೆಗಾಸ್ಟಾರ್ ಚಿರಂಜೀವಿ ಇದೀಗ ಆಂಧ್ರಪ್ರದೇಶದ ರಾಜಕೀಯ 'ರಂಗ'ದಲ್ಲಿಯೂ ಭಾರಿ ಬೇಡಿಕೆಯಲ್ಲಿರುವ ನಟ. ಕಾಂಗ್ರೆಸ್ ಬಳಿಕ, ಇದೀಗ ಕಾಂಗ್ರೆಸ್ ವಿರೋಧಿ ವೇದಿಕೆ ಕಟ್ಟಲು ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷವು ಚಿರಂಜೀವಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದೆ.
ಸ್ವಂತ ಬಲದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಸವಾಲೊಡ್ಡುವುದು ಕಷ್ಟಸಾಧ್ಯ ಎಂದು ನಂಬಿರುವ ಟಿಡಿಪಿಯ ಚಂದ್ರಬಾಬು ನಾಯ್ಡು, ಇದಕ್ಕಾಗಿ ಬಲ ಒಗ್ಗೂಡಿಸಲು ಚಿರಂಜೀವಿ ಅವರ ಪಿಆರ್‌ಪಿ (ಪ್ರಜಾ ರಾಜ್ಯಂ ಪಾರ್ಟಿ) ಯೊಂದಿಗೆ ಪಾಲುದಾರಿಕೆ ನಡೆಸಲು ನಿರ್ಧರಿಸಿದ್ದಾರೆ.
ನಾಯ್ಡು ಅವರ ಆತ್ಮೀಯನೂ ಆಗಿರುವ ಚಿತ್ರ ನಿರ್ಮಾಪಕ ಅಶ್ವಿನಿ ದತ್ ಅವರು ಚಿರಂಜೀವಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಆದರೆ ಇದೊಂದು ಸೌಜನ್ಯದ ಭೇಟಿ ಎಂದು ಚಿರಂಜೀವಿ ಅವರು ರಾಜತಾಂತ್ರಿಕ ಕಾರಣಗಳನ್ನು ನೀಡಿ ಸುಮ್ಮನಾಗಿದ್ದಾರೆ.
ಪ್ರಜಾ ರಾಜ್ಯಂ ಮುಖ್ಯಸ್ಥ ಚಿರಂಜೀವಿಯತ್ತ ಕಾಂಗ್ರೆಸ್ ಪಕ್ಷವೂ ಕಣ್ಣು ಮಿಟುಕಿಸಿತ್ತು. ಆಂಧ್ರದ ಕಾಂಗ್ರೆಸ್ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ದೂತ, ಕೆವಿಪಿ ರಾಮಚಂದ್ರ ರಾವ್ ಅವರು ಚಿರಂಜೀವಿಯ ಭಾವನೂ ಆಗಿರುವ ಪ್ರಜಾ ರಾಜ್ಯಂ ಪ್ರಧಾನ ಕಾರ್ಯದರ್ಶಿ ಅಲ್ಲು ಅರವಿಂದ್‌ರನ್ನು ಭೇಟಿಯಾಗಿದ್ದಾರೆ.
ಆದರೆ, ವಿಧಾನಸಭೆ ಚುನಾವಣೆಗಳೂ ನಡೆಯುತ್ತಿರುವ ಆಂಧ್ರಪ್ರದೇಶದಲ್ಲಿ ಚಿರಂಜೀವಿ ಅವರು ತಮ್ಮೆಲ್ಲಾ ಅವಕಾಶಗಳನ್ನು ಮುಕ್ತವಾಗಿರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಸಾಕಷ್ಟು ಸಂಖ್ಯೆಗಳು ದೊರೆತರೆ ನೇರವಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆಯೇ ಚಿರು ಕಣ್ಣಿಟ್ಟಿದ್ದಾರೆ ಮತ್ತು ಕಾಂಗ್ರೆಸ್ ಅಥವಾ ತೆಲುಗು ದೇಶಂ ಸಹಾಯವನ್ನೂ ಯಾಚಿಸಬಹುದು ಎನ್ನಲಾಗುತ್ತಿದೆ. |