ಒರಿಸ್ಸಾದ ಕಂಧಮಾಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಸತ್ತಿದ್ದಾರೆ ಎನ್ನಲಾದ ಮಂದಿ ಇನ್ನೂ ಬದುಕಿಯೇ ಇದ್ದಾರೆ ಎಂದು ಒರಿಸ್ಸಾ ಸರ್ಕಾರ ಹೇಳಿರುವುದು ಈಗ ಈ ಪ್ರಕರಣಕ್ಕೆ ವಿಚಿತ್ರ ತಿರುವು ನೀಡಿದೆ.
ಕಂಧಮಾಲ್ ಪ್ರಕರಣದಿಂದಾಗಿಯೇ ಬಿಜೆಪಿ ಜತೆಗಿನ ಮೈತ್ರಿ ಮುರಿದ ನವೀನ್ ಪಟ್ನಾಯಿಕ್ ನೇತೃತ್ವದ ಬಿಜೆಡಿ ಸರ್ಕಾರ, ಇದೀಗ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ಮೃತರ ಪಟ್ಟಿಯಲ್ಲಿ ಸ್ಥಾನ ಪಡೆದ ಹಲವರು ಸತ್ತೇ ಇಲ್ಲ. ಅವರು ಇನ್ನೂ ಬದುಕುಳಿದಿದ್ದಾರೆ. ಇದರಲ್ಲಿ ಆರ್‌ಎಸ್‌ಎಸ್ ಮಂದಿಯೂ ಸೇರಿದ್ದಾರೆ ಎಂದು ವಾದಿಸಿದೆ. ಜತೆಗೆ ಇದಕ್ಕೆ ತನ್ನಲ್ಲಿ ಆಧಾರವಿದೆ ಎಂದೂ ಸವಾಲು ಹಾಕಿದೆ.
ಕಟಕ್ ಆರ್ಚ್ ಬಿಷಪ್ ರಾಫೆಲ್ ಚೀನತ್ ತಯಾರು ಮಾಡಿದ ಸತ್ತವರ ಪಟ್ಟಿಯಲ್ಲಿ ನಕ್ಸಲೀಯರಿಂದ ಹತರಾದ ಆರ್‌ಎಸ್ಎಸ್ ಮಂದಿಯೂ ಸೇರಿದ್ದಾರೆ. ಆದರೆ ಈ ಪಟ್ಟಿಯಲ್ಲಿರುವ ಅನೇಕರು ಈಗಲೂ ಬದುಕಿದ್ದಾರೆ. ಅಲ್ಲದೆ ಚೀನತ್ ಅವರು ಕಳೆದ ವರ್ಷ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಕೊಲೆ ಪ್ರಕರಣದ ನಂತರ ನಡೆದ ಕಂಧಮಾಲ್‌ನ ಭಾರೀ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 93 ಎಂದು ಪಟ್ಟಿಯಲ್ಲಿ ಬರೆದಿದ್ದಾರೆ. ಆದರೆ ಅಫಿಡವಿಟ್‌ನಲ್ಲಿ 42ಕ್ಕೂ ಹೆಚ್ಚು ಮಂದಿ ಎಂದು ಬರೆದಿದೆ. ಈ ಎರಡರಲ್ಲಿ ಭಾರೀ ವ್ಯತ್ಯಾಸ ಕಾಣುತ್ತಿದೆ ಎಂದು ಬಿಜೆಡಿ ಆರೋಪಿಸಿದೆ.
ಅರ್ಜಿದಾರರ ಸಲ್ಲಿಸಿದ ಪಟ್ಟಿಯಲ್ಲಿ ಆರ್‌ಎಸ್ಎಸ್ ಮಂದಿಯೂ ಇದ್ದಾರೆ. ಧನುರ್ಜಯ ಪ್ರಧಾನಿ, ಅಜಿತ್ ಕುಮಾರ್ ಮಲ್ಲಿಕ್, ಪ್ರಭಾತ್ ಪಾಣಿಗ್ರಹಿ ಎಂಬವರು ನಕ್ಸಲರಿಂದ ಹತರಾಗಿದ್ದಾರೆ ಎಂದು ಪಟ್ಟಿಯಲ್ಲಿದೆ. ಇವರನ್ನು ಹೊರತುಪಡಿಸಿ ಪಟ್ಟಿಯಲ್ಲಿರುವ ಹತ್ತು ಮಂದಿ ಬದುಕಿರುವುದನ್ನು ನಾವು ಪತ್ತೆಹಚ್ಚಿದ್ದೇವೆ. ಅಲ್ಲದೆ ಆರ್ಚ್ ಬಿಷಪ್ ಅವರ ಪಟ್ಟಿಯಲ್ಲಿ ಪೊಲೀಸ್ ಗುಂಡೇಟಿನಿಂದ ಹತರಾದ ಮೂವರು ಹಾಗೂ ಇಬ್ಬರು ಪೊಲೀಸರ ಹೆಸರೂ ಇದೆ ಎಂದು ಬಿಜೆಡಿ ಹೇಳಿದೆ. ಸತ್ತವರ ಸಂಖ್ಯೆಯನ್ನು ವೈಭವೀಕರಿಸಲಾಗಿದೆ ಎಂದೂ ಒರಿಸ್ಸಾ ಸರ್ಕಾರ ಆರೋಪಿಸಿದೆ.
ಕಾಣೆಯಾದವರ ಬಗ್ಗೆ ಸ್ಥಳೀಯ ಪೊಲೀಸರ ಮೂಲಕ ಮಾಹಿತಿ ಕಲೆ ಹಾಕಿದರೆ, ಗಲಭೆಯವಲ್ಲಿ ಹತರಾಗಿದ್ದಾರೆ ಎನ್ನಲಾದ 10 ಮಂದಿ ಇನ್ನೂ ಬದುಕಿದ್ದಾರೆ. 25 ಮಂದಿ ಕೆಲವು ವೈದ್ಯಕೀಯ ತೊಂದರೆಗಳಿಂದ ಸತ್ತಿದ್ದಾರೆ. 12 ಮಂದಿಯ ಬಗ್ಗೆ ಮಾಹಿತಿ ಕಲೆ ಹಾಕಲು ಆಗುತ್ತಿಲ್ಲ ಹಾಗೂ ಇನ್ನುಳಿದ ಎರಡು ಇಬ್ಬರು ಸ್ಥಳೀಯರಲ್ಲ ಎನ್ನುತ್ತದೆ ಪಟ್ನಾಯಿಕ್ ಸರ್ಕಾರ.
ಇದೀಗ ನ್ಯಾಯಾಲಯದ ಮೆಟ್ಟಿಲಲ್ಲಿದ್ದು, ಇನ್ನೂ ತೀರ್ಪು ಹೊರಬಿದ್ದಿಲ್ಲ. ಅರ್ಜಿದಾರರು ಇನ್ನೂ ಒರಿಸ್ಸಾ ಸರ್ಕಾರದ ಅಫಿಡವಿಟ್‌ಗೆ ಉತ್ತರಿಸಬೇಕಿದೆ. ರಾಜ್ಯ ಸರ್ಕಾರದ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ಹೇಳುವ ಪ್ರಕಾರ, ಸರ್ಕಾರ ಈಗಾಗಲೇ ಸತ್ತವರ ಕುಟುಂಬಗಳಿಗೆ ಸಾಧ್ಯವಿದ್ದಷ್ಟು ಪರಿಹಾರ ಒದಗಿಸಿದೆ. ಆದರೆ ಕೇಂದ್ರ ಮಾತ್ರ ತನ್ನ ಪಾಲಾದ ಮೂರು ಲಕ್ಷ ರೂಪಾಯಿಗಳ ಪರಿಹಾರವನ್ನು ಈ ಕುಟುಂಬಗಳಿಗೆ ನೀಡಿಲ್ಲ ಎಂದು ಹೇಳಿದ್ದಾರೆ. |