ಐದು ಸುತ್ತಿನ ಸುದೀರ್ಘ ಪ್ರಜಾಸತ್ತಾತ್ಮಕ ಪ್ರಕ್ರಿಯೆ 'ಮತದಾನ' ಮುಗಿಯುವ ಮುನ್ನವೇ ತೃತೀಯ ರಂಗಕ್ಕೊಂದು ಶಾಕ್. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡನೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆಗೆ ಮುಖಮುಚ್ಚಿಕೊಂಡು ಭೇಟಿ ನೀಡಿರುವುದು ತೃತೀಯ ರಂಗವನ್ನು ತಲ್ಲಣಗೊಳಿಸಿದ್ದರೆ, ಆ ಬಳಿಕ ದಿಢೀರ್ ಪತ್ರಿಕಾಗೋಷ್ಠಿ ಕರೆಯಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ ಕುಮಾರಸ್ವಾಮಿ ಪತ್ರಕರ್ತರ ಪ್ರಶ್ನೆಯ ಬಾಣಗಳಿಗೆ ಉತ್ತರಿಸಲು ತಡಕಾಡುತ್ತಿದ್ದುದು ಸ್ಪಷ್ಟವಾಗಿತ್ತು.
ತೃತೀಯ ರಂಗದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಈಗಾಗಲೇ ಎನ್‌ಡಿಎ ತೆಕ್ಕೆಗೆ ಸೇರಿಕೊಂಡಿದ್ದರೆ, ಇದೀಗ ರಂಗವನ್ನು ಕಟ್ಟುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಜನತಾ ದಳ (ಎಸ್) ಕೂಡ, ಕಾಂಗ್ರೆಸ್ ಮನೆ ಬಾಗಿಲು ಬಡಿದಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ಸೋಮವಾರ ರಾತ್ರಿ ಟಿವಿ ಕ್ಯಾಮರಾಮೆನ್‌ಗಳಿಂದ ತಪ್ಪಿಸಿಕೊಂಡೇ ನವದೆಹಲಿಯ 10, ಜನಪಥ್‌ನಲ್ಲಿ ಸೋನಿಯಾ ಗಾಂಧಿಯನ್ನು ಭೇಟಿಯಾಗಲೆಂದು ಬಂದ ಕುಮಾರಸ್ವಾಮಿಗೆ ಅಚ್ಚರಿ, ಆಘಾತ ಕಾದಿತ್ತು. ಅಲ್ಲೇ ನಾಲ್ಕಾರು ಮಂದಿ ಪತ್ರಕರ್ತರು ಕಾದು ಕುಳಿತಿದ್ದರು! ಇದನ್ನು ನೋಡಿದ ತಕ್ಷಣ ಬಿಳಿ ಮರ್ಸಿಡಿಸ್ ಕಾರಿನಲ್ಲಿ ಬಂದ ಕುಮಾರಸ್ವಾಮಿ ಕರ್ಚೀಫ್‌ನಿಂದ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ಕಾರಿನ ಹಿಂದಿನ ಸೀಟಿನಲ್ಲಿ ಅವರ ತಂದೆ, ಎಚ್.ಡಿ.ದೇವೇಗೌಡರನ್ನೇ ಹೋಲುವ ಆಕೃತಿಯೊಂದು ಕಂಡುಬಂದಿದ್ದು, ಅದು ದೇವೇಗೌಡರೇ ಎಂಬುದು ಇನ್ನೂ ಖಚಿತವಾಗಿಲ್ಲ. ಇನ್ನೊಂದು ಮೂಲದ ಪ್ರಕಾರ, ಕಾರಿನ ಹಿಂದಿನ ಸೀಟಿನಲ್ಲಿದ್ದದು ಕೆ.ಸಿ.ಕೊಂಡಯ್ಯ.
ಈ ಸುದ್ದಿ ಟಿವಿ ಚಾನೆಲ್‌ಗಳಲ್ಲಿ ಪ್ರಕಟವಾಗುತ್ತಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡುವ ಅನಿವಾರ್ಯತೆಯಲ್ಲಿ ಸಿಲುಕಿದ ಕುಮಾರಸ್ವಾಮಿ, ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ಕರ್ನಾಟಕದ ವಿಷಯವಾಗಿ ಸೋನಿಯಾ ಗಾಂಧಿ ಚರ್ಚಿಸಿದ್ದಾಗಿಯೂ, ತೃತೀಯ ರಂಗವು ಇನ್ನೂ ಇದೆ, ಅದಕ್ಕೆ ಏನೂ ಆಗಿಲ್ಲ ಎಂದೂ ಸ್ಪಷ್ಟನೆ ನೀಡಿದರು. ತಮ್ಮ ಭೇಟಿ ಬಗ್ಗೆ ಅಪ್ಪನಿಗೆ ಗೊತ್ತಿಲ್ಲ ಎಂದೂ ಹೇಳಿದರೂ, ಇದನ್ನು ಯಾರು ಕೂಡ ನಂಬುವಂತೆಯೂ ಇರಲಿಲ್ಲ.
ಬೆವರಿದ್ದಕ್ಕಾಗಿ ಮುಖ ಮುಚ್ಚಿಕೊಂಡದ್ದು ಎಂದ ಕುಮಾರ! ಹಾಗಿದ್ದರೆ ಮುಖ ಮುಚ್ಚಿಕೊಳ್ಳುವ ಅಗತ್ಯವೇನಿತ್ತು ಎಂದು ಪತ್ರಕರ್ತರು ಪ್ರಶ್ನಿಸಿದಾಗ, ದೆಹಲಿಯಲ್ಲಿ ಸಿಕ್ಕಾಪಟ್ಟೆ ಸೆಖೆ, ಬೆವರು. ಹೀಗಾಗಿ ನಾನು ಬೆವರೊರೆಸಿಕೊಳ್ಳುತ್ತಿದ್ದೆ ಎಂದು ಕುಮಾರ ಅವರು ಒಂದು ಟಿವಿ ಚಾನೆಲ್‌ಗೆ ಉತ್ತರ ನೀಡಿದ್ದರೆ, ಮತ್ತೊಂದು ಟಿವಿ ಚಾನೆಲ್‌ನವರು ಪ್ರಶ್ನಿಸಿದಾಗ, ನಾನು ಯಾವಾಗಲೂ ತಲೆ ತಗ್ಗಿಸಿಯೇ ಇರುವುದು, ನನ್ನ ಜಾಯಮಾನವೇ ಹಾಗೆ ಎಂದು ಉತ್ತರಿಸಿದ್ದರು! ರಾತ್ರಿ ಸುಮಾರು ಏಳೂ ಮುಕ್ಕಾಲರ ಸಮಯಕ್ಕೆ ಮುಖ ಮುಚ್ಚಿಕೊಂಡೇ ಸೋನಿಯಾ ನಿವಾಸಕ್ಕೆ ಕಾಲಿಟ್ಟ ಕುಮಾರ, ಅಷ್ಟೇ ರಹಸ್ಯವಾಗಿ ಹಿಂಬಾಗಿಲಿನಿಂದ ಹೊರಹೋಗಿಬಿಟ್ಟಿದ್ದರು. ಈ ಸಂದರ್ಭ ನಡೆದ ಮಾತುಕತೆಯಲ್ಲಿ ಸೋನಿಯಾ ಅವರು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸಿಗೆ ಸಹಾಯ ಮಾಡಿದ್ದಕ್ಕಾಗಿ ಕುಮಾರಣ್ಣನಿಗೆ ಸೋನಿಯಾ ಕೃತಜ್ಞತೆ ಸಲ್ಲಿಸಿದರು ಎಂದು ತಿಳಿದುಬಂದಿದೆ.
ಅಂದರೆ ಎಸಿ ಕಾರಿನೊಳಗಿದ್ದುಕೊಂಡು ಬೆವರಿದರೇ ಕುಮಾರಸ್ವಾಮಿ? ಎಂಬುದು ಯಾರೂ ಅಂದಾಜಿಸಬಹುದಾದ ಸಂಗತಿ.
ಎಡರಂಗದಲ್ಲಿ ಅಸಮಾಧಾನ ಈ ಬೆಳವಣಿಗೆಯನ್ನು ಎಡರಂಗ ಬೆಂಬಲಿತ ತೃತೀಯ ರಂಗವನ್ನು ಮೊಗ್ಗಿನಲ್ಲೇ ಚಿವುಟುವ ಕಾಂಗ್ರೆಸ್ ತಂತ್ರವಾಗಿಯೂ ಕಾಣಲಾಗುತ್ತಿದೆ. ಮಾತ್ರವಲ್ಲದೆ ರಾಜ್ಯದಲ್ಲಿ ಹೇಗೂ ಬಿಜೆಪಿ ಪ್ರಬಲವಾಗಿದ್ದು, ಕೇಂದ್ರದಲ್ಲಿಯೂ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೆ ಕುತ್ತು ಎಂಬ ಲೆಕ್ಕಾಚಾರದಲ್ಲಿ, ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದರೆ ಎಂಬ ಜಾಣ್ಮೆಯ ಲೆಕ್ಕಾಚಾರವೂ ಈ ಭೇಟಿಯ ಹಿಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೆಲ ಕಾಂಗ್ರೆಸ್ ಮುಖಂಡರ ಒತ್ತಾಸೆಯ ಮೇರೆಗೇ ತಾವು ಸೋನಿಯಾರನ್ನು ಭೇಟಿಯಾಗಿರುವುದಾಗಿ ಕುಮಾರಸ್ವಾಮಿ ತಿಳಿಸಿರುವುದು ಈಗಾಗಲೇ ಎಡ ರಂಗದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಪೂರ್ವ ನಿಯೋಜಿತ ದಂಡ ಯಾತ್ರೆ! ವಾಸ್ತವವಾಗಿ ಮೂರ್ನಾಲ್ಕು ದಿನಗಳ ಹಿಂದೆಯೇ ದೆಹಲಿಗೆ ಆಗಮಿಸಿರುವ ಕುಮಾರಸ್ವಾಮಿ, ಸೋನಿಯಾ ಭೇಟಿಗಾಗಿ ಕಾಯುತ್ತಿದ್ದರು. ವಿಶೇಷವೆಂದರೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮತ್ತು ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿದೇಶದಲ್ಲಿರುವಾಗ ಕುಮಾರಣ್ಣನ ದೆಹಲಿ ದಂಡಯಾತ್ರೆ ನಡೆದಿದೆ.
ಆ ಬಳಿಕ ದೆಹಲಿಯಲ್ಲಿ ದೇವೇಗೌಡರ ನಿವಾಸಕ್ಕೆ ಪತ್ರಕರ್ತರ ದಂಡು ಧಾವಿಸಿತು. ಅಲ್ಲಿದ್ದ ಪಕ್ಷದ ರಾಷ್ಟ್ರೀಯ ವಕ್ತಾರ ಡ್ಯಾನಿಶ್ ಅಲಿ ಗಲಿಬಿಲಿಗೊಂಡು, ದೇವೇಗೌಡರ ಪತ್ರಿಕಾಹೇಳಿಕೆಯನ್ನು ಬಿಡುಗಡೆ ಮಾಡಿದರು. 'ಇದೆಲ್ಲಾ ರಾಜಕೀಯ ಕುತಂತ್ರ, ತೃತೀಯ ರಂಗದ ದಾರಿ ತಪ್ಪಿಸುವ ಹುನ್ನಾರ. ಸೋನಿಯಾ-ಕುಮಾರ ಭೇಟಿ ವಿಚಾರ ನನಗೊತ್ತಿಲ್ಲ' ಎಂಬ ನಿರೀಕ್ಷಿತ ಹೇಳಿಕೆ ದೇವೇಗೌಡರಿಂದ ಹೊರಬಂತು.
ಏನು ಭೇಟಿಯ ಹಿಂದಿನ ಮಸಲತ್ತು? ಸೋನಿಯಾರನ್ನು ಕುಮಾರ ಅವರು ಅವಸರದಲ್ಲಿ ಭೇಟಿ ಮಾಡಿದ್ದರಲ್ಲಿ ಮೂರು ಪ್ರಮುಖ ಅಂಶಗಳಿವೆ. ಒಂದನೆಯದು, ಕೇಂದ್ರದಲ್ಲಿ ಭಾವಿ ಸರಕಾರ ರಚನೆಯಾದಲ್ಲಿ ಅದರಲ್ಲಿ ಸೇರಿಕೊಳ್ಳುವುದು ಅಥವಾ ತೃತೀಯ ರಂಗಕ್ಕೆ ಬೆಂಬಲ ಯಾಚಿಸುವುದು, ಎರಡನೆಯದೆಂದರೆ, ಶಿವಕುಮಾರ್ ಮತ್ತು ದೇಶಪಾಂಡೆ ವಿದೇಶದಲ್ಲಿರುವುದು ಹಾಗೂ ಮೂರನೇ ಕಾರಣವೆಂದರೆ, ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಕೇಂದ್ರದ ಹೊಸ ಸರಕಾರದೊಂದಿಗೆ ಸೇರಿ ಕಡಿವಾಣ ಹಾಕುವುದು.
ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಒಳಒಪ್ಪಂದದ ಮೂಲಕ ಕಾಂಗ್ರೆಸ್ ಎದುರು ಜೆಡಿಎಸ್ ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ. ಇದರ ಲಾಭ ಪಡೆದು ಕಾಂಗ್ರೆಸ್ ಏನಾದರೂ ಒಂದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾದರೆ, ಅದು ನಮ್ಮಿಂದ ಎಂದು ಸೋನಿಯಾಗೆ ಮನವರಿಕೆ ಮಾಡುವ ಉದ್ದೇಶವೂ ಇದರ ಹಿಂದಿರಬಹುದು. ಫಲಿತಾಂಶ ಘೋಷಣೆಯಾದ ನಂತರ, ಅಥವಾ ಅಂತಿಮ ಸುತ್ತಿನ ಚುನಾವಣೆ ನಡೆದ ನಂತರ ಸೋನಿಯಾ ಮೇಡಂ ಸಿಕ್ಕಾಪಟ್ಟೆ ಬ್ಯುಸಿ ಆಗುವುದರಿಂದ, ಆ ಬಳಿಕ ಅವರನ್ನು ಭೇಟಿ ಮಾಡುವುದು ಆಗದ ಹೋಗದ ಮಾತು. ಈ ಕಾರಣಕ್ಕೆ ಈ ದಿಢೀರ್ ಭೇಟಿಯೂ ನಡೆದಿದೆ ಎನ್ನಲಾಗುತ್ತಿದೆ.
ಹಿಂದೆ ಕಾಂಗ್ರೆಸ್ ಸಂಬಂಧ ಕಳಚಿಕೊಂಡು ಬಿಜೆಪಿ ಜತೆ ಸೇರಿಕೊಂಡು ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರು ಸರಕಾರ ರಚಿಸಿದ್ದೂ 'ತಂದೆಗೆ ಗೊತ್ತಿರಲಿಲ್ಲ'. ಈಗಲೂ ಅದೇ ಹೇಳಿಕೆ ಹೊರಬಿದ್ದಿದೆ. ಈ ಕುರಿತು ಬುಧವಾರ ದೇವೇಗೌಡರು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಗಳಿವೆ.
|