ಸಮಾಜವಾದಿ ಪಕ್ಷದ ಧುರೀಣರಾದ ಅಮರ್ ಸಿಂಗ್ ಹಾಗೂ ಅಜಮ್ ಖಾನ್ ಸಮರ ಈಗ ತಾರಕ್ಕೇರುತ್ತಿದೆ. ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಅಮರ್ ಸಿಂಗ್ ಇದೀಗ, ಅಜಮ್ ಖಾನ್ ಅವರು ಕೆಲವು ಬೆದರಿಸುವ ಹೇಳಿಕೆ ನೀಡಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರಿಗೆ ಪತ್ರಮುಖೇನ ಸಂಪರ್ಕಿಸಿರುವ ಅಮರ್ ಸಿಂಗ್, ನಾನು ರಾಮಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದಾಗ, ಆ ಕ್ಷೇತ್ರದ ಶಾಸಕರಾಗಿರುವ ಅಜಮ್ ಖಾನ್ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲವರು ಹಣ ಪಡೆದುಕೊಂಡಿದ್ದು, ಚುನಾವಣಾ ದಿನದಂದು ಹೊರಗೆ ಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದಿದ್ದರು ಎಂದು ಪತ್ರದಲ್ಲಿ ಸಿಂಗ್ ಉಲ್ಲೇಖಿಸಿದ್ದಾರೆ.ಅಮರ್ ಸಿಂಗ್ ತನ್ನ ಪತ್ರದೊಂದಿಗೆ ಹಲವು ಪತ್ರಿಕೆಗಳ ಪ್ರತಿಯಲ್ಲಿ ಪ್ರಕಟವಾದ ಖಾನ್ ಅವರ ಹೇಳಿಕೆಯನ್ನೂ ದಾಖಲೆಯಾಗಿ ಆಯೋಗಕ್ಕೆ ನೀಡಿದ್ದಾರೆ. ಅಲ್ಲದೆ, ಚುನಾವಣಾ ಸಮಯದಲ್ಲಿ ಇಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಅಜಂ ಖಾನ್ ಐಪಿಸಿಯ 171-ಸಿ ವಿಧಿಯ ಉಲ್ಲಂಘನೆ ಮಾಡಿದಂತೆ ಎಂದು ಹೇಳಿದ್ದಾರೆ.ಮತದಾರರನ್ನು ಬೆದರಿಸುವ ಕಾರ್ಯ ಮಾಡಿದ ಅಜಂ ಖಾನ್ ವಿರುದ್ಧ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದಿರುವ ಅಮರ್ ಸಿಂಗ್, ಖಾನ್ ಅವರು ಸಾರ್ವಜನಿಕವಾಗಿ ಈ ಹೇಳಿಕೆ ನೀಡಿದ್ದಾರೆ. ಅವರು ರಾಮಪುರದ ಅಭ್ಯರ್ಥಿ ಜಯಪ್ರದಾರನ್ನಷ್ಟೇ ಅಲ್ಲ, ಹಿಂದೆ ಪಕ್ಷದ ಅಬು ಅಜ್ಮಿ ಅವರ ವಿರುದ್ಧವೂ ಇದೇ ಇಂತಹುದೇ ಹುನ್ನಾರ ನಡೆಸಿದ್ದರು. ಅವರು ರಾಮಪುರದ ಹಿಂದು ಹಾಗೂ ಮುಸ್ಲಿ ಮತದಾರರನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಮರ್ ದೂರಿದರು.ಚುನಾವಣೆ ಮುಗಿಯುವವರೆಗೆ ಖಾನ್ ಅವರನ್ನು ಚುನಾವಣಾ ಆಯೋಗ ವಶಕ್ಕೆ ತೆಗೆದುಕೊಳ್ಳಬೇಕು ಎಂದೂ ಅಮರ್ ಸಿಂಗ್ ಇದೇ ವೇಳೆ ಒತ್ತಾಯಿಸಿದರು. |