ಬದ್ಧ ರಾಜಕೀಯ ವೈರಿ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮಿತ್ರಕೂಟಗಳ ನಡುವೆ ಕತ್ತು ಕತ್ತಿನ ಹೋರಾಟ ನಡೆಯುತ್ತಿರುವ ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಡಿಎಂಕೆ ಭಾರಿ ಪ್ರಮಾಣದಲ್ಲಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಬೆಳಿಗ್ಗೆ ಮತದಾನ ಆರಂಭವಾದಂದಿನಿಂದ ಮತದಾನ ಯಂತ್ರಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಅಲ್ಲಿ ಎಐಎಡಿಎಂಕೆ ಚಿಹ್ನೆಯೂ ಕಾಣಿಸುತ್ತಿಲ್ಲ ಎಂಬ ಬಗ್ಗೆ ರಾಜ್ಯಾದ್ಯಂತ ತನಗೆ ಸಾಕಷ್ಟು ದೂರವಾಣಿ ಕರೆಗಳು ಬರುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ನಾಯಕಿ ಜಯಲಲಿತಾ ದೂರಿದ್ದಾರೆ.
ಎರಡು ಎಲೆಗಳ ಚಿಹ್ನೆ (ಎಐಎಡಿಎಂಕೆ) ಇರುವ ಬಟನ್ ಒತ್ತಿದರೆ, ಉದಯಿಸುವ ಸೂರ್ಯ (ಡಿಎಂಕೆ) ಚಿಹ್ನೆಯೆದುರಿನ ದೀಪ ಬೆಳಗುತ್ತದೆ ಎಂದು ಹೇಳಿರುವ ಜಯಲಲಿತಾ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದಿದ್ದಾರೆ.
ದಕ್ಷಿಣ ಚೆನ್ನೈ ಕ್ಷೇತ್ರದಲ್ಲಿ ಇದು ನಿರ್ದಿಷ್ಟವಾಗಿ ಕಂಡುಬಂದಿದೆ. ಅದೇ ರೀತಿ ಸೆಂಟ್ರಲ್ ಚೆನ್ನೈ ಕ್ಷೇತ್ರದಲ್ಲಿ, ಶಾಲೆಯೊಂದರಲ್ಲಿದ್ದ ಬೂತ್ ಅನ್ನು ಡಿಎಂಕೆ ಕಾರ್ಯಕರ್ತರು ವಶಪಡಿಸಿಕೊಂಡಿದ್ದಾರೆ. ಅಲ್ಲಿಗೆ ಮೊತ್ತ ಮೊದಲು ಓಟು ಹಾಕಬೇಕೆಂದು 7 ಗಂಟೆಗೇ ಹೋದ ವ್ಯಕ್ತಿಗೆ, ಅದಾಗಲೇ ಹತ್ತು ಮಂದಿ ಓಟು ಹಾಕಿದವರು ನಿಂತಿರುವುದು ಕಂಡುಬಂತು. ಮತ್ತಷ್ಟು ಜನರು ಮತದಾನಕ್ಕೆ ಬರತೊಡಗಿರುವಂತೆ, ಇದೇ ಹತ್ತು ಮಂದಿ ಪದೇ ಪದೇ ಮತ ಚಲಾಯಿಸುತ್ತಿದ್ದರು ಎಂದು ಜಯಾ ಆಪಾದಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತಾದರೂ, ಪೊಲೀಸರು ಬರುವ ಹೊತ್ತಿಗೆ ಆ ಹತ್ತು ಮಂದಿ ಓಡಿ ಹೋಗಿದ್ದರು ಎಂದು ಹೇಳಿರುವ ಅವರು, ಜನರು ಅವರನ್ನು ಹಿಡಿಯಲು ಪ್ರಯತ್ನ ಪಟ್ಟರಾದರೂ, ವಿಫಲರಾದರು ಎಂದರು.
ಪ್ಯಾರಾಮಿಲಿಟರಿ ಪಡೆಗಳನ್ನು ಕೂಡ ನಿಯೋಜಿಸಲಾಗಿಲ್ಲ. ಕೆಲವೆಡೆ ಮತದಾನ ಯಂತ್ರಗಳು ಕೆಟ್ಟು ಹೋಗಿರುವುದರಿಂದ ಬೆಳಗ್ಗಿನಿಂದಲೇ ಮತದಾರರು ಓಟು ಮಾಡಲು ಕಾಯುತ್ತಿದ್ದಾರೆ. ಈ ಬಗೆಗೂ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು. |