ಚುನಾವಣಾ ಪ್ರಕ್ರಿಯೆ ಮುಗಿಯತೊಡಗುತ್ತಿರುವಂತೆಯೇ ಯುಪಿಎ ಹೊರಗಿರುವ ಪಕ್ಷಗಳತ್ತ ದೃಷ್ಟಿ ನೆಟ್ಟಿರುವ ಕಾಂಗ್ರೆಸ್, ತನ್ನ ಮುಂದಾಳುತ್ವದಲ್ಲಿ ಕೇಂದ್ರದಲ್ಲಿ ರಚನೆಯಾಗಲಿರುವ ಸರಕಾರ ಸೇರಲು ಎಲ್ಲ 'ಜಾತ್ಯತೀತ' ಪಕ್ಷಗಳಿಗೆ ಮುಕ್ತ ಆಹ್ವಾನ ನೀಡಿದೆ.
ಯುಪಿಎ ಒಗ್ಗಟ್ಟಾಗಿದೆ. ನಾವು ಯಾವುದೇ ಮಿತ್ರರ ಕೈಬಿಟ್ಟಿಲ್ಲ. ಎಲ್ಲ ಜಾತ್ಯತೀತ ಪಕ್ಷಗಳಿಗೆ ಸುಸ್ವಾಗತ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಜನಾರ್ದನ ದ್ವಿವೇದಿ ಅವರು ಮುಕ್ತವಾಗಿ ಆಹ್ವಾನಿಸಿದ್ದಾರೆ.
ಪ್ರಧಾನಿಯಾಗಿ ಆಡ್ವಾಣಿಯನ್ನು ಬೆಂಬಲಿಸುವ ಎಲ್ಲ ರಾಜಕೀಯ ಪಕ್ಷಗಳಿಗೆ ಎನ್‌ಡಿಎ ಸೇರಿಕೊಳ್ಳಲು ಮುಕ್ತ ಸ್ವಾಗತ ಎಂದು ಬಿಜೆಪಿ ಕೂಡ ಮಂಗಳವಾರ ಹೇಳಿಕೆ ನೀಡಿತ್ತು. ಹೀಗಾಗಿ ಕೇಂದ್ರದಲ್ಲಿ ಈ ಬಾರಿ ಸ್ವಂತ ಬಲದಿಂದ ಅಧಿಕಾರ ಸ್ಥಾಪಿಸುವುದು ಯಾವುದೇ ಪ್ರಧಾನ ರಾಜಕೀಯ ಪಕ್ಷಕ್ಕೆ ಅಸಾಧ್ಯದ ಮಾತು ಎಂಬುದು ನಿಚ್ಚಳವಾಗುತ್ತಿದೆ.
ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸದಲ್ಲಿರುವ ಕಾಂಗ್ರೆಸ್ ಪಕ್ಷವು ಎನ್‌ಡಿಎ ಹಾಗೂ ತೃತೀಯ ರಂಗದೊಳಗಿರುವ ಪಕ್ಷಗಳನ್ನು ಸೆಳೆಯುವ ಉದ್ದೇಶದಿಂದಲೇ ಈ ಆಹ್ವಾನ ನೀಡಿದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು. ಮೇ 16ರಂದು ಈ ಕುರಿತು ಮಾತುಕತೆ, ಚರ್ಚೆ, ವಿವರಣೆ ಎಲ್ಲವೂ ನಡೆಯಲಿದೆ ಎಂದು ಅವರು ಹೇಳಿಕೆ ನೀಡುವ ಮೂಲಕ, ಭರ್ಜರಿ ಕುದುರೆ ವ್ಯಾಪಾರಕ್ಕೆ ಎನ್‌ಡಿಎ-ಯುಪಿಎ ವೇದಿಕೆಗಳು ಸಿದ್ಧವಾಗಿವೆ ಎಂಬುದರ ಸೂಚನೆ ದೊರೆತಿದೆ.
ಈ ಮಧ್ಯೆ, ಕಾಂಗ್ರೆಸ್ ಪಕ್ಷವು ಯಾವುದೇ ಎರಡು, ಮೂರು, ನಾಲ್ಕು ಅಥವಾ ಐದನೇ ರಂಗಕ್ಕೆ ಬೆಂಬಲಿಸುವ ಪ್ರಮೇಯವೇ ಇಲ್ಲ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. |