ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಯಾವುದೇ ಕಾರಣಕ್ಕೂ ಎಡಪಕ್ಷಗಳೊಂದಿಗೆ ಕೈಜೋಡಿಸದಿರುವಂತೆ ಆಂಧ್ರಪ್ರದೇಶದ ಟಿಡಿಪಿ ವರಿಷ್ಠ ಚಂದ್ರಬಾಬುನಾಯ್ಡು, ಪ್ರಜಾರಾಜ್ಯಂನ ಚಿರಂಜೀವಿ ಜತೆ ಅಮೆರಿಕದ ರಾಯಭಾರಿ ರಹಸ್ಯ ಮಾತುಕತೆ ವೇಳೆ ಒತ್ತಡ ಹೇರಿದ್ದಾರೆಂಬ ವದಂತಿ ದಟ್ಟವಾಗಿ ಹಬ್ಬತೊಡಗಿದೆ.
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಎಡಪಕ್ಷಗಳು ಅಡ್ಡಿ ಉಂಟು ಮಾಡಿರುವುದು ಅಮೆರಿಕದ ಕೋಪಕ್ಕೆ ಕಾರಣವಾಗಿದ್ದು, ಇದೀಗ ಭಾರತದಲ್ಲಿ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ನಂತರ ಎಡಪಕ್ಷಗಳು ಪ್ರಬಲಗೊಂಡರೆ ಅಮೆರಿಕಕ್ಕೆ ಮತ್ತಷ್ಟು ಅಡ್ಡಿ ಉಂಟಾಗಲಿದೆ ಎಂಬ ನಿಟ್ಟಿನಲ್ಲಿ ಭಾರತದ ರಾಜಕಾರಣದಲ್ಲೂ ಅಮೆರಿಕ ಸೇಡಿನ ರಾಜಕೀಯಕ್ಕೆ ಮುಂದಾಗಿದೆ ಎಂದು ಎಡಪಕ್ಷದ ಹಿರಿಯ ಮುಖಂಡರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.
ಚುನಾವಣೆಯ ಫಲಿತಾಂಶಕ್ಕೆ ಎರಡು ದಿನಗಳು ಬಾಕಿ ಇರುವ ಮುನ್ನ ಹೈದರಾಬಾದ್‌ಗೆ ಆಗಮಿಸಿರುವ ಅಮೆರಿಕದ ರಾಯಭಾರಿ ಪೀಟರ್ಸ್ ಬರ್ಲಿ ಅವರು ತೆಲುಗುದೇಶಂನ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಪ್ರಜಾರಾಜ್ಯಂ ಪಕ್ಷದ ಚಿರಂಜೀವಿ ಹಾಗೂ ಕಾಂಗ್ರೆಸ್‌ನ ಸುರೇಶ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿ, ಫಲಿತಾಂಶದ ನಂತರ ಯಾವುದೇ ಕಾರಣಕ್ಕೂ ಎಡಪಕ್ಷಗಳಿಗೆ ಬೆಂಬಲ ನೀಡದಂತೆ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.
ಚಂದ್ರಬಾಬು ನಾಯ್ಡು ಅವರ ಜತೆ ಬರ್ಲಿ ಅವರು ಸುಮಾರು 30ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು, ಅದೇ ರೀತಿ ಹೊಸ ಪಕ್ಷವಾಗಿರುವ ಪ್ರಜಾರಾಜ್ಯಾಂನ ಚಿರಂಜೀವಿ ಹಾಗೂ ಕಾಂಗ್ರೆಸ್‌ನ ರೆಡ್ಡಿ ಜತೆಯೂ ರಹಸ್ಯವಾಗಿ ಚರ್ಚೆ ನಡೆಸಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿವೆ.
ಭಾರತದಲ್ಲಿ ಎಡಪಕ್ಷಗಳಿಗೆ ಹೊಡೆತ ನೀಡಲು ಅಮೆರಿಕ ಸ್ಕೆಚ್ ಹಾಕಿದೆಯೇ ಎಂಬುದಾಗಿ ಟಿಡಿಪಿ, ಪ್ರಜಾರಾಜ್ಯಂ ವರಿಷ್ಠರನ್ನು ಪ್ರಶ್ನಿಸಿದರೆ, ಇಲ್ಲ ಆ ರೀತಿ ಚರ್ಚೆ ನಡೆದೇ ಇಲ್ಲ. ಅಮೆರಿಕದಲ್ಲಿರುವ ತೆಲುಗು ಜನರ ಕುರಿತು ಮಾತುಕತೆ ನಡೆಸಿದ್ದಾರೆಂದು ಸಮಜಾಯಿಷಿಕೆ ನೀಡಿದ್ದಾರೆ. ಒಟ್ಟಾರೆ ಭಾರತದ ರಾಜಕೀಯದಲ್ಲೂ ಅಮೆರಿಕ ಹಸ್ತಕ್ಷೇಪ ನಡೆಸುತ್ತಿರುವುದು ಎಡಪಕ್ಷಗಳಿಗೆ ಮತ್ತಷ್ಟು ಆಕ್ರೋಶ ತರಿಸಿದೆ. |