ಯುಪಿಎ ಸರ್ಕಾರ ಸ್ವಿಸ್ ಅಧಿಕಾರಿಗಳಿಗೆ ಪೂನಾ ಮೂಲದ ಲೋಹದ ಮೊಳೆ ಹಾಗೂ ಇನ್ನಿತರ ವಸ್ತು ತಯಾರಿ ಕೇಂದ್ರದದ ಮಾಲಿಕ ಹಸನ್ ಅಲಿ ಖಾನ್ ಅವರ ವಿವರಗಳ ನಕಲಿ ದಾಖಲೆಗಳನ್ನು ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ಜತೆಗೆ, ಈ ಉದಾಹರಣೆಯಿಂದಲೇ ಯುಪಿಎ ಸರ್ಕಾರ ಎಂದೆಂದಿಗೂ ಸ್ವಿಸ್‌ನಲ್ಲಿರುವ ಭಾರತದ ಕಪ್ಪು ಹಣವನ್ನು ಮರಳಿ ತರುವುದಿಲ್ಲ ಎಂದು ಖಾತ್ರಿಯಾಗುತ್ತದೆ ಎಂದು ಹೇಳಿದೆ.
ಭಾರತ ಸರ್ಕಾರ ನಕಲಿ ದಾಖಲೆಗಳನ್ನು ಕಳುಹಿಸಿರುವುದರಿಂದಲೇ ಹಸನ್ ಅಲಿ ಖಾನ್ ಅವರ ಖಾತೆಯ ದಾಖಲೆಗಳನ್ನು ಸ್ವಿಸ್ ಅಧಿಕಾರಿಗಳು ತಿರಸ್ಕರಿಸಿದ್ದು, ಅಲಿ ಅವರ ಖಾತೆಯ ಬಗ್ಗೆಗಿನ ಮಾಹಿತಿಗಳನ್ನು ಹೊರಹಾಕಿದ್ದಾರೆ ಎಂದು ಹಿರಿಯ ಬಿಜೆಪಿ ಸಂಸದ ಅರುಣ್ ಶೌರಿ ಹೇಳಿದ್ದಾರೆ.
ಈ ವಿಷಯವನ್ನು ಸ್ವಿಸ್ ಅಧಿಕಾರಿಗಳೂ ಒಪ್ಪಿಕೊಂಡಿದ್ದು, ಭಾರತದ ಸರ್ಕಾರಕ್ಕೂ 2007ರಲ್ಲೇ ದಾಖಲೆಗಳು ನಕಲಿಯಾಗಿವೆ ಎಂಬ ವಿಷಯದ ಮಾಹಿತಿಯನ್ನು ನೀಡಿದ್ದೇವೆ ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದರು ಎಂದು ಶೌರಿ ಹೇಳಿದ್ದಾರೆ.
ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲೂ ಯುಪಿಎ ಸರ್ಕಾರ ಈ ವಿಷಯವನ್ನು ಅದುಮಿಟ್ಟಿದೆ ಎಂದು ಶೌರಿ ಆರೋಪಿಸಿದರು.
ಸ್ವಿಸ್ ಬ್ಯಾಂಕ್ ವಿಚಾರವನ್ನು ಮುಂದೂಡುತ್ತಲೇ ಬರುವ ಯುಪಿಎ ಸರ್ಕಾರ ಆ ಮೂಲಕ ಹಸನ್ ಅಲಿ ಖಾನ್ ಅವರಿಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದ ಶೌರಿ, ಹಸನ್ ಅಲಿ ಅವರಿಗೆ ದಾವೂದ್ ಜತೆಗೂ ಸಂಪರ್ಕವಿದೆ. ಭಾರತೀಯ ಮಾರುಕಟ್ಟೆಗೆ ಹೆಸರಿಲ್ಲದ ದೊಡ್ಡ ಮೊತ್ತದ ಹಣ ಹರಿದು ಬರುತ್ತಿರುವುದಕ್ಕೂ ಖಾನ್ ಅವರೇ ಕಾರಣ ಎಂದರು. ಖಾನ್ ಅವರ ಎಂಟರಿಂದ ಒಂಬತ್ತು ಬಿಲಿಯನ್ ಡಾಲರ್‌ಗಳಷ್ಟು ಹಣ ಯುಬಿಎಸ್ ಹಾಗೂ ಇತರ ಸ್ವಿಸ್ ಬ್ಯಾಂಕ್‍ಗಳಲ್ಲಿವೆ ಎಂದು ಶೌರಿ ತಿಳಿಸಿದರು. |