ತನ್ನನ್ನು ಪಕ್ಷದಿಂದ ಕಿತ್ತೆಸೆದ ಸಿಪಿಎಂ ಈ ಬಾರಿ ಚುನಾವಣೆಯಲ್ಲಿ ಹೇಗೆ ಮೇಲೇಳುತ್ತದೆ ಎಂಬುದೇ ಈಗ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರಿಗೆ ಇರುವ ದೊಡ್ಡ ಪ್ರಶ್ನೆ. ಅವರ ಅಂದಾಜಿನ ಪ್ರಕಾರ, ಈ ಬಾರಿ ಸಿಪಿಎಂ ಕಡಿಮೆ ಲೋಕಸಭಾ ಸೀಟುಗಳನ್ನು ಪಡೆದುಕೊಳ್ಳಲಿದೆ.ಆದರೂ ಚಟರ್ಜಿ ಅವರ ಲೆಕ್ಕಾಚಾರದ ಪ್ರಕಾರ, ಸಿಪಿಎಂ ಕಡಿಮೆ ನೀಟು ಪಡೆದುಕೊಂಡರೂ ಚುನಾವಣೆಯ ನಂತರ ಮಹತ್ವದ ಪಾತ್ರವನ್ನೇ ವಹಿಸಲಿದೆ.ಇಲ್ಲಿ ಪತ್ರಿಕಾ ಪ್ರತಿನಿಧಿಗಳ ಜತೆ ಮಾತನಾಡಿದ ಹಿರಿಯ ರಾಜಕೀಯ ಧುರೀಣ ಸೋಮನಾಥ ಚಟರ್ಜಿ ಹೇಳುವಂತೆ, ನನಗೆ ಸಿಪಿಎಂ ನಡೆ ಬಗ್ಗೆ ಹಲವು ಸಂದೇಹಗಳಿವೆ. ಕೆಲವು ಸಂದೇಹಗಳನ್ನು ಈ ಮೊದಲೇ ಕೇಳಿದ್ದೇನೆ. ಇನ್ನು ಕೆಲವನ್ನು ಕೇಳಲು ನನಗೆ ಸೂಕ್ತ ವೇದಿಕೆಯೇ ಇಲ್ಲ. ನಾನೀಗ ಪಕ್ಷದಲ್ಲಿಲ್ಲ. ಹಾಗಾಗಿ ನಾನು ಹೊರಗೆ ಮಾತಾಡಬೇಕಷ್ಟೆ ಎಂದರು.ಮಹತ್ವದ ವಿಷಯವೆಂದರೆ ಎಡಪಕ್ಷವನ್ನು ಯಾರೂ ನಿರ್ಲಕ್ಷ್ಯ ಮಾಡುತ್ತಿಲ್ಲ. ನಿರ್ಲಕ್ಷ್ಯ ಮಾಡುತ್ತಿದ್ದರೂ, ಅದನ್ನು ಪರಿಗಣಿಸಿ ಎಂದ ಅವರು, ಬಹುಶಃ ಈ ಬಾರಿ ಅಂದು ಪಡೆದಷ್ಟು ಸೀಟುಗಳು ಅದಕ್ಕೆ ದಕ್ಕಲಿಕ್ಕಿಲ್ಲ. ಆದರೂ ಅದು ಭಾರತೀಯ ರಾಜಕೀಯದಲ್ಲಿ ಮುಂದೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು.ಎಡಪಕ್ಷಗಳು ಅಣುಬಿಕ್ಕಟ್ಟು ಸಂದರ್ಭ ಯುಪಿಎ ಸರ್ಕಾರದಿಂದ ತಮ್ಮ ಬೆಂಬಲ ವಾಪಸ್ ಪಡೆದ ಸಂದರ್ಭ ಸ್ಪೀಕರ್ ಸ್ಥಾನ ತ್ಯಜಿಸಲು ಒಲ್ಲದ ಕಾರಣ ಚಟರ್ಜಿಯವರ್ನನು ಸಿಪಿಎಂನಿಂದ ಹೊರಹಾಕಲಾಗಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತಾನು ಮತ್ತೆ ಚಟರ್ಜಿಯವರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಚಟರ್ಜಿ, ನನಗೇನೂ ಈ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ನನ್ನ ಜತೆ ಯಾರೂ ಮಾತುಕತೆಗೂ ಬಂದಿಲ್ಲ ಎಂದಷ್ಟೇ ಹೇಳಿದರು. |