ದೇಶಾದ್ಯಂತ ಒಟ್ಟು 71 ಸಾವಿರ ಮತದಾರರನ್ನು ಸಂದರ್ಶಿಸಿ ರಾಜ್ಯವಾರು ಕೈಗೊಳ್ಳಲಾಗಿರುವ ಎನ್‌ಡಿಟಿವಿ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸ್ಥಾನ ನಷ್ಟವಾಗಲಿದ್ದು, ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಸಿಕೊಳ್ಳಲಿದ್ದರೆ, ಜೆಡಿಎಸ್ ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲಿದೆ.
ಅದರ ಪ್ರಕಾರ, 28ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 17 ಸ್ಥಾನಗಳನ್ನು (ಕಳೆದ ಬಾರಿ 18) ಮತ್ತು ಕಾಂಗ್ರೆಸ್ ಕಳೆದ ಬಾರಿಗಿಂತ ಒಂದು ಸ್ಥಾನ ಹೆಚ್ಚಿಸಿಕೊಂಡು 9 ಸ್ಥಾನಗಳನ್ನು ಗಳಿಸಿಕೊಳ್ಳಲಿದ್ದರೆ, ತೃತೀಯ ರಂಗ (ಜೆಡಿಎಸ್-ಎಡರಂಗ)ವು 2 ಸ್ಥಾನ ಗಳಿಸಲಿದೆ.
ತಮಿಳುನಾಡು ಅದೇ ರೀತಿ, ಎಲ್ಲರೂ ಕುತೂಹಲದಿಂದ ದೃಷ್ಟಿ ನೆಟ್ಟಿರುವ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಸ್ಥಾನಗಳಿಗಾಗಿ ಕತ್ತುಕತ್ತಿನ ಸ್ಪರ್ಧೆ ಏರ್ಪಟ್ಟಿದೆ.
ಇಲ್ಲಿ ಡಿಎಂಕೆ ನೇತೃತ್ವದ ಯುಪಿಎಯು ಕಳೆದ ಬಾರಿಯ 6 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, 20 ಸ್ಥಾನ ಗಳಿಸಲಿದೆ. ಎಐಎಡಿಎಂಕೆಯು ಐದು ಸ್ಥಾನ ಗಳಿಸಿಕೊಂಡು ತನ್ನ ಸೀಟುಗಳ ಸಂಖ್ಯೆಯನ್ನು 18ಕ್ಕೆ ಏರಿಸಿಕೊಳ್ಳಲಿದೆ.
ಬಿಹಾರ ಭಾರೀ ಕುತೂಹಲ ಕೆರಳಿಸಿರುವ ಬಿಹಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆಧಿಪತ್ಯ ಅಂತ್ಯವಾಗುವ ಲಕ್ಷಣಗಳು ಖಚಿತವಾಗಿ ಗೋಚರಿಸುತ್ತಿದ್ದು, ಇಲ್ಲಿ ಎನ್‌ಡಿಎ ಭರ್ಜರಿ ವಿಜಯ ಸಾಧಿಸಲಿದೆ. 40ರಲ್ಲಿ 33 ಸ್ಥಾನಗಳೂ ಜೆಡಿಯು-ಬಿಜೆಪಿ ಮಿತ್ರಕೂಟದ ಪಾಲಾಗಲಿದೆ ಎನ್ನುತ್ತದೆ ಎನ್‌ಡಿಟಿವಿ ಸಮೀಕ್ಷೆ. ಇದು ಕಳೆದ ಬಾರಿಗಿಂತ (11) 22 ಹೆಚ್ಚು. ಯುಪಿಎಯು ತನ್ನ ಕೈಯಲ್ಲಿರುವ ಮೂರರಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಬಾಕಿ ಉಳಿದ ಅದರ ನಷ್ಟವನ್ನು ಯುಪಿಎಯಿಂದ ಹೊರ ಹೋಗಿ ಚುನಾವಣೆಗೆ ಸ್ಪರ್ಧಿಸಿರುವ ಲಾಲು-ರಾಮವಿಲಾಸ್ ಪಾಸ್ವಾನ್ ಜೋಡಿ ಹಂಚಿಕೊಳ್ಳಲಿದ್ದಾರೆ. 21 ಸ್ಥಾನಗಳನ್ನು ಕಳೆದುಕೊಳ್ಳಲಿರುವ ಆರ್‌ಜೆಡಿ-ಎಲ್‌ಜೆಪಿ ಎಂಬ ಚತುರ್ಥ ರಂಗವು ಕೇವಲ 5 ಸ್ಥಾನಗಳಿಗೆ ತೃಪ್ತಿ ಪಡಬೇಕಾಗಿದೆ. ನಿತೀಶ್ ಕುಮಾರ್ ಮತ್ತವರ ಮುಖ್ಯಮಂತ್ರಿ ಪದವಿಗೆ ಇದು ಜನಮನ್ನಣೆ ಎಂದು ಭಾವಿಸಲಾಗುತ್ತಿದೆ.
ಆಂಧ್ರಪ್ರದೇಶ 42 ಸ್ಥಾನಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ತನ್ನ ಪ್ರಾಬಲ್ಯವನ್ನು ಮರಳಿ ದೃಢಪಡಿಸಿಕೊಂಡು 2004ರ ನಿರ್ವಹಣೆಯನ್ನೇ ಮರಳಿ ಪ್ರದರ್ಶಿಸಲಿದೆ. ಅಂದರೆ 29 ಸ್ಥಾನಗಳನ್ನು ಉಳಿಸಿಕೊಳ್ಳಲಿದೆ. ಟಿಡಿಪಿ ಒಳಗೊಂಡಿರುವ ತೃತೀಯ ರಂಗವು 3 ಸ್ಥಾನ ಹೆಚ್ಚಿಸಿಕೊಂಡು 10 ಸೀಟುಗಳನ್ನು ಪಡೆಯಲಿದೆ. ಎನ್‌ಡಿಎ 2004ರಲ್ಲಿ ಪಡೆದ 3 ಸ್ಥಾನ ಕಳೆದುಕೊಂಡು ಕೇವಲ 2 ಸ್ಥಾನ ಗಳಿಸಲಿದೆ.
ಗುಜರಾತ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಂತೆಯೇ, ಗುಜರಾತಿನಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ಪ್ರಭಾವ ಬೀರಲಿದ್ದಾರೆ. 2004ಕ್ಕಿಂತ 4 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿರುವ ಬಿಜೆಪಿ 18 ಸ್ಥಾನ ಗಳಿಸಲಿದ್ದರೆ, ಯುಪಿಎ ನಾಲ್ಕು ಸ್ಥಾನ ಕಳೆದುಕೊಂಡು 8ಕ್ಕೆ ಇಳಿಯಲಿದೆ.
ಒರಿಸ್ಸಾ ಬಿಜೆಪಿ-ಬಿಜೆಡಿ ಮೈತ್ರಿಯಲ್ಲಿ ಒಡಕುಂಟಾಗಿರುವುದು ಕಾಂಗ್ರೆಸ್‌ಗೆ ಲಾಭದಾಯಕವಾಗಿ ಪರಿಣಮಿಸಲಿದ್ದು, ಯುಪಿಎ ಕಳೆದ ಬಾರಿಗಿಂತ 7 ಸ್ಥಾನ ಹೆಚ್ಚಿಸಿಕೊಂಡು 10 ಸೀಟುಗಳನ್ನು ಗಳಿಸಲಿದ್ದರೆ, ತೃತೀಯ ರಂಗವು 2 ಸ್ಥಾನ ಕಳೆದುಕೊಂಡು 9 ಸ್ಥಾನ ಪಡೆಯಲಿದೆ. ಎನ್‌ಡಿಎ 2004ಕ್ಕಿಂತ 5 ಕ್ಷೇತ್ರಗಳನ್ನು ಕಳೆದುಕೊಂಡು ಕೇವಲ 2 ಸ್ಥಾನಕ್ಕೆ ತೃಪ್ತಿಪಡಬೇಕಾಗಬಹುದು.
ಒಟ್ಟಾರೆ ಇದುವರೆಗೆ ಎನ್‌ಡಿಟಿವಿ ಪ್ರಕಟಿಸಿರುವ ಆರು ರಾಜ್ಯಗಳ 196 ಕ್ಷೇತ್ರಗಳಲ್ಲಿ ಎನ್‌ಡಿಎ ಕಳೆದ ಬಾರಿಗಿಂತ(55) 17 ಸ್ಥಾನಗಳನ್ನು ಹೆಚ್ಚು ಸೇರಿಸಿಕೊಂಡು 72ಕ್ಕೇರಲಿದೆ. 81 ಸ್ಥಾನಗಳನ್ನು ಹೊಂದಿದ್ದ ಯುಪಿಎ 4 ಸ್ಥಾನ ಕಳೆದುಕೊಂಡು 77ಕ್ಕೆ ಇಳಿಯಲಿದೆ. ಹೊಸ ಅವತಾರದಲ್ಲಿರುವ ತೃತೀಯ ರಂಗವು ಆರು ಸ್ಥಾನಗಳನ್ನು ಹೆಚ್ಚಿಸಿಕೊಂಡು 39 ಸ್ಥಾನಗಳನ್ನು ಮತ್ತು ಚತುರ್ಥರಂಗವು ಭರ್ತರಿ 20 ಸ್ಥಾನಗಳನ್ನು ಕಳೆದುಕೊಂಡು ಕೇವಲ 6 ಸ್ಥಾನಗಳಿಗೆ ತೃಪ್ತಿಪಡಬೇಕಾಗಿ ಬರಬಹುದು. |