ತಮ್ಮ ಕ್ಷೇತ್ರ ಫಿಲಿಬಿಟ್‌ನಲ್ಲಿ ನಡೆಸಿದ ಚುನಾವಣಾ ರ‌್ಯಾಲಿಯಲ್ಲಿ 'ಹಗೆನುಡಿಯ' ಭಾಷಣ ಮಾಡಿದ ಆರೋಪದಲ್ಲಿ ಬಿಜೆಪಿ ಯುವ ನೇತಾರ ವರುಣ್ ಗಾಂಧಿ ಮೇಲೆ ಹೇರಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಕೇಸನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ಗುರುವಾರ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶಿಸಿರುವುದರೊಂದಿಗೆ, ಉ.ಪ್ರ. ಮುಖ್ಯಮಂತ್ರಿ, ಬಿಎಸ್ಪಿ ನಾಯಕಿ ಮಾಯಾವತಿ ಮುಖಭಂಗ ಅನುಭವಿಸಿದ್ದಾರೆ.
ಹೈಕೋರ್ಟಿನ ಸಲಹಾ ಮಂಡಳಿಯು ವರುಣ್ ಮೇಲಿನ ಎನ್ಎಸ್ಎ ಹೇರಿಕೆ ಅಮಾನ್ಯ ಎಂದು ಕಳೆದ ವಾರ ಶಿಫಾರಸು ಮಾಡಿರುವುದನ್ನು ಪ್ರಶ್ನಿಸಿ ಮಾಯಾವತಿ ಅವರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ತನ್ನ ವಿರುದ್ಧ ಎನ್ಎಸ್ಎ ಹೇರಿದ್ದನ್ನು ರದ್ದುಪಡಿಸುವಂತೆ ವರುಣ್ ಅವರು ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದ್ದು, ಮಾಯಾವತಿ ಅರ್ಜಿ ಜೊತೆಗೆ ಈ ಅರ್ಜಿಯನ್ನೂ ವಿಚಾರಣೆ ನಡೆಸಿದ ನ್ಯಾಯಾಲಯವು ಗುರುವಾರ ತೀರ್ಪು ಪ್ರಕಟಿಸಿದೆ.
ವರುಣ್ ಸದ್ಯ ಪರೋಲ್ ಮೇಲೆ ಬಿಡುಗಡೆಗೊಂಡಿದ್ದು, ಅವರ ಪರೋಲ್ ಅವಧಿ ಗುರುವಾರ ಕೊನೆಗೊಳ್ಳುತ್ತದೆ. ಈ ಮಧ್ಯೆ, ಸುಮಾರು 20 ದಿನಗಳ ಕಾಲ ವರುಣ್ ಗಾಂಧಿಯನ್ನು ಜೈಲಿನಲ್ಲಿಟ್ಟಿರುವುದರ ವಿರುದ್ಧ ಉತ್ತರ ಪ್ರದೇಶ ಸರಕಾರದ ವಿರುದ್ಧ ವರುಣ್ ಕುಟುಂಬ ತೀವ್ರವಾಗಿ ಕೆಂಡ ಕಾರಿದೆ.
ಯುಪಿಎ ಹಾಗೂ ಮಾಯಾವತಿಯವರ ದ್ವೇಷ ರಾಜಕಾರಣಕ್ಕೆ ಇದು ದೊಡ್ಡ ಹೊಡೆತ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. |