ಚುನಾವಣಾ ಲೆಕ್ಕಾಚಾರ, ಸಮೀಕ್ಷೆಗಳು ನಿಜವಾಗುವುದಿಲ್ಲ ಎಂದು ಹೇಳುವ ಮೂಲಕ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಈ ಚುನಾವಣೆಯಲ್ಲಿ ಮಹತ್ವಾಕಾಂಕ್ಷೆಯ್ನು ಹೊಂದಿದ್ದಾರೆ.ಚಂದ್ರಬಾಬು ನಾಯ್ಡು ಪ್ರಕಾರ, ಯುಪಿಎ ಆಗಲಿ, ಎನ್‌ಡಿಎ ಆಗಲಿ ಸ್ಪಷ್ಟಬಹುಮತ ಗಳಿಸಲು ಸಾಧ್ಯವಿಲ್ಲ. ಹೊಸ ಗೆಳೆತನ, ಹೊಸ ಗುಂಪುಗಾರಿಕೆ ಹಾಗೂ ಹೊಸ ವಿರಸಗಳು ಮೇ 16ರ ನಂತರ ಆರಂಭವಾಗುತ್ತವೆ. ಆದರೆ, ಈ ಸಮೀಕ್ಷೆಗಳು, ಅಂದಾಜು ಲೆಕ್ಕಾಚಾರಗಳು ಹಾಗೂ ಗಾಸಿಪ್ಪುಗಳಿಗೆ ಮಾತ್ರ ಕಿವಿಕೊಡುವುದು ಅಗತ್ಯವಿಲ್ಲ ಎನ್ನುತ್ತಾರೆ.ಗುಂಟೂರು, ನಿಜಾಮಾಬಾದ್, ಮೇಡಕ್, ನಲ್ಗೊಂಡಾಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು, ಮೇ 17ರಂದು ನಾನು ದೆಹಲಿಗೆ ಹೋಗಲಿದ್ದು, ಹೊಸ ಗೆಳೆತನ, ಗುಂಪುಗಾರಿಕೆಗಳ ಬಗ್ಗೆ ಕಾರ್ಯಪ್ರವೃತ್ತನಾಗುತ್ತೇನೆ. ತೃತೀಯ ರಂಗ ಸರ್ಕಾರ ರಚನೆಯತ್ತ ಸಾಗಲು ಸಾಧ್ಯವಾಗುವ ಸಂಭವವಿದೆಯೇ ಎಂದೂ ನೋಡುತ್ತೇನೆ ಎಂದರು.ರಾಜಕೀಯದಲ್ಲಿ ಇದೀಗ ಟಿಡಿಪಿಗೆ ಎನ್‌ಡಿಎ ಜತೆ ಸಹಕಾರ ನೀಡದೆ ವಿಧಿಯೇ ಇಲ್ಲ ಎಂದು ಗುಸುಗುಸು ಶುರುವಾಗಿದೆ. ಇಂತಹ ಗಾಸಿಪ್ಪನ್ನು ಹುಟ್ಟು ಹಾಕಿದ್ದೇ ಬಿಜೆಪಿ. ಯಾಕೆಂದರೆ ಅವರಿಗೇ ಗೊತ್ತಿದೆ ಅವರು ಸ್ಪಷ್ಟ ಬಹುಮತ ಗಳಿಸಲು ಸಾಧ್ಯವಾಗುವುದಿಲ್ಲ ಎಂದು. ಅದಕ್ಕೇ ಇಂತಹ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂದು ಟೀಕಿಸಿದ ನಾಯ್ಡು, ಟಿಡಿಪಿ ತೃತೀಯ ರಂಗದೊಂದಿಗೇ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ ನಾಯ್ಡು ಅವರು, ತೃತೀಯ ರಂಗದ ರೂವಾರಿ ಮಾಜಿ ಪ್ರಧಾನಮಂತ್ರಿ ದೇವೇಗೌಡ ಯುಪಿಎ ಜತೆಗೆ ಕೈಜೋಡಿಸುವ ಬಗ್ಗೆ ವರದಿಯಾಗಿದ್ದು, ಈ ಬೆಳವಣಿಗೆಯ ನಂತರ ದೇವೇಗೌಡರ ಜತೆಗೆ ನಾನು ಚರ್ಚಿಸಿದ್ದೇನೆ. ಇಂತಹ ವರದಿಯಲ್ಲಿ ಹುರುಳಿಲ್ಲ. ದೇವೇಗೌಡ ಅವರೇ ಸ್ವತಃ ಸ್ಪಷ್ಟವಾಗಿ ಯುಪಿಎ ಜತೆಗೆ ಸಹಕಾರ ಕೊಡುವ ಪ್ರಶ್ನೆಯೇ ಇಲ್ಲ. ತೃತೀಯ ರಂಗದಲ್ಲೇ ಮುಂದುವರಿಯುವುದಾಗಿ ಹೇಳಿದ್ದಾರೆ ಎಂದರು.ಕಳೆದ ಚುನಾವಣೆಯಲ್ಲಿ ಟಿಡಿಪಿ ಸ್ವಲ್ಪ ಕಠಿಣ ಪರಿಸ್ಥಿತಿ ಎದುರಿಸಿತ್ತಾದರೂ, ಈ ಬಾರಿ ಹಾಗಗಾಗಲು ಸಾಧ್ಯವಿಲ್ಲ. ಪಕ್ಷದ ಕಾರ್ಯಕರ್ತರು ಪಕ್ಷಕ್ಕಾಗಿ ಹಗಲಿರುಲು ದುಡಿದಿದ್ದಾರೆ ಎಂದರು. |