ಕಾಂಗ್ರೆಸ್‌ಗೆ ಎಡದ ದಿಕ್ಕಿನಿಂದ ಶುಭ ಸುದ್ದಿ. ಕೇಂದ್ರದಲ್ಲಿ ಕಾಂಗ್ರೆಸ್ಸೇತರ, ಬಿಜೆಪಿಯೇತರ ಸರಕಾರ ರಚನೆಗೆ ತೀವ್ರ ಪ್ರಯತ್ನ ನಡೆಸುವ ನಾವು, ಏನೇ ಆದರೂ ಬಿಜೆಪಿಯು ಸರಕಾರ ರಚಿಸದಂತೆ ತಡೆದೇ ಸಿದ್ಧ ಎಂದು ಎಡಪಕ್ಷಗಳು ಹೇಳಿವೆ.
ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸುವುದಾಗಿಯೂ ಎಡಪಕ್ಷಗಳ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ, ಬಿಜೆಪಿ ಕೂಟವು ಅಧಿಕಾರಕ್ಕೇರದಂತಾಗಲು ಅಲ್ಪಸಂಖ್ಯಾಕ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಸ್ತಿತ್ವಕ್ಕೆ ಬರಲು ಎಡರಂಗವು ಅನುವು ಮಾಡುತ್ತದೆ ಎಂಬುದು ಕಾಂಗ್ರೆಸ್ ದೃಢವಿಶ್ವಾಸ.
ಎಡರಂಗ ಬಂದರೆ ನಾನಿಲ್ಲ ಎಂದಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯನ್ನು ಮನವೊಲಿಸುವ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಭರವಸೆಯಿದೆ.
ಕಾಂಗ್ರೆಸ್ ಮೂಲಗಳು ಹೇಳುವಂತೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಜೊತೆಗೆ ಹಿಂಬಾಗಿಲಿನ ಮಾತುಕತೆಗಳು ಈಗಲೂ ಜಾರಿಯಲ್ಲಿದೆ. ಮೇ 16ರಂದು ಫಲಿತಾಂಶ ಹೊರಬಿದ್ದ ನಂತರ, ಬದ್ಧ ವಿರೋಧಿ ಪಕ್ಷಗಳಾದ ಬಿಎಸ್ಪಿ ಅಥವಾ ಎಸ್ಪಿಯಲ್ಲಿ ಯಾವ ಪಕ್ಷಕ್ಕೆ ಅತ್ಯಧಿಕ ಸ್ಥಾನಗಳು ಬರುತ್ತವೆಯೋ, ಅವುಗಳತ್ತ ವಾಲಿಕೊಳ್ಳುವುದು ಕಾಂಗ್ರೆಸ್ ರಣತಂತ್ರ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಯುಪಿಎಯಿಂದ ದೂರವಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಎಲ್‌ಜೆಪಿ ಮುಖ್ಯಸ್ಥ ರಾಮವಿಲಾಸ್ ಪಾಸ್ವಾನ್ ಅವರ ಸಂಪರ್ಕದಲ್ಲಿದ್ದಾರೆ. ಬಿಹಾರದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿಕೊಳ್ಳಲಿದೆ ಎಂದು ನಂಬಲಾದ ಈ ಮುಖಂಡರಿಬ್ಬರ ಬದ್ಧವಿರೋಧಿ, ಜೆಡಿಯುನ ನಿತೀಶ್ ಕುಮಾರ್ ಅವರನ್ನು ಸೆಳೆದುಕೊಳ್ಳುವ ಕುರಿತಾಗಿಯೂ ದೊಡ್ಡ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಮೂಲಗಳು ತಿಳಿಸಿವೆ. |