ಚುನಾವಣಾ ಫಲಿತಾಂಶ ಬರಲು ಇನ್ನು ಕೇವಲ 48 ಗಂಟೆಗಳು ಬಾಕಿ ಇರುವಾಗಲೇ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ತನ್ನ ಪಕ್ಷದ ಲೋಕಸಭೆ ಹಾಗೂ ವಿಧಾನ ಸಭೆಗೆ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳೂ ಗುರುವಾರ ಸಂಜೆಯ ವೇಳೆಗೆ ರಾಜ್ಯ ರಾಜಧಾನಿಯ ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಹಾಜರಾಗಬೇಕೆಂದು ಕಟ್ಟಪ್ಪಣೆ ಹೊರಡಿಸಿದೆ. ಪ್ರಮುಖ ಪಕ್ಷಗಳ ಚುನಾವಣಾ ಬೇಟೆ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರವನ್ನು ತಪ್ಪಿಸಲು ಪಕ್ಷ ಈ ನಿರ್ಧಾರ ತಳೆದಿದೆ.
ಪಕ್ಷದ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ಈಗ ದೆಹಲಿಯಿಂದ ಗುರುವಾರ ಬೆಳಿಗ್ಗೆ ಈ ಹಿನ್ನೆಲೆಯಲ್ಲಿ ಸೂಕ್ತ ತಯಾರಿ ನಡೆಸಲು ಹೈದರಾಬಾದ್‌ಗೆ ಮರಳಿದ್ದಾರೆ. ಅವರು ತಮ್ಮ ಅಭ್ಯರ್ಥಿಗಳಿಗೆ ಎಷ್ಟರ ಮಟ್ಟಿಗಿನ ತಾಕೀತು ಮಾಡಿದ್ದಾರೆಂದರೆ, ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನೊಂದಿಗೆ ಸತತವಾಗಿ ಟೆಲಿಫೋನ್ ಸಂಪರ್ಕದಲ್ಲಿರಬೇಕು. ಮನೆಯಿಂದ ಹೊರಡುವ ಸಮಯದಿಂದ ಹಿಡಿದು ಹೈದರಾಬಾದ್‌ನ ಪಕ್ಷದ ಕಚೇರಿ ತಲುಪುವಲ್ಲಿವರೆಗೂ ತಮ್ಮ ಚಲನವಲನ ಹೇಳುತ್ತಿರಬೇಕು ಎಂದಿದ್ದಾರೆ.
ಪಕ್ಷದ ಅಭ್ಯರ್ಥಿಗಳು ಟಿವಿ ಸುದ್ದಿವಾಹಿನಿಗಳನ್ನು ನೋಡುತ್ತಾ ತಮ್ಮ ಕ್ಷೇತ್ರದ ಮಾಹಿತಿ ಕಲೆ ಹಾಕುತ್ತಿರಬೇಕು. ಗೆದ್ದರೆ ತಮ್ಮ ಸರ್ಟಿಫಿಕೇಟ್‌ಗಳನ್ನು ಅಧಿಕಾರಿಗಳಿಂದ ಪಡೆದುಕೊಳ್ಳಬೇಕು ಎಂದೂ ನಿರ್ದೇಶಿಸಿದ್ದಾರೆ. ಅಲ್ಲದೆ ಅಭ್ಯರ್ಥಿಗಳು ಇಲ್ಲದಿರುವಾಗ ದೊಡ್ಡ ಮೊತ್ತದ ಹಣದ ಆಮಿಷ ತೋರಿಸಿ ಆಕರ್ಷಿಸುವ ಕೆಲವು ಹುನ್ನಾರಗಳೂ ವಿವಿಧ ಪಕ್ಷಗಳಿಂದ ನಡೆಯುತ್ತಿವೆ. ಹಾಗಾಗಿ ಯಾವುದೇ ಕಾರಣಕ್ಕೂ ಅಭ್ಯರ್ಥಿಗಳ ಮನೆ ಮಂದಿ ಇಂತಹ ಆಮಿಷಗಳಿಗೆ ಬಲಿಯಾಗಬಾರದು ಎಂದು ಹೇಳಿದ್ದಾರೆ. ಪ್ರತಿ ಅಭ್ಯರ್ಥಿಯ ಮನೆ ಮಂದಿಯನ್ನೂ ಖಾಸಗಿಯಾಗಿ ಕರೆದು ಚಂದ್ರಶೇಖರ್ ಈ ಕಿವಿಮಾತನ್ನು ಹೇಳಿದ್ದಾರೆ. |