ಭೂಗತ ಪಾತಕಿ ಛೋಟಾ ಶಕೀಲ್ ಸಹಚರ ಗುರ್‌ಪ್ರೀತ್ ಸಿಂಗ್ ಭುಲ್ಲಾರ್ ಎಂಬಾತನನ್ನು ಮುಂಬೈ ಪೊಲೀಸರು ಬ್ಯಾಂಕಾಕ್‌ನಲ್ಲಿ ಬಂಧಿಸಿದ್ದಾರೆ. ಮೂರು ಮಂದಿಯ ಪೊಲೀಸ್ ಅಧಿಕಾರಿಗಳ ತಂಡ ಥಾಯ್‌ಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ಗೆ ಕಳೆದ ವಾರವೇ ಪ್ರಯಾಣ ಬೆಳೆಸಿದ್ದು, ಗುರ್‌ಪ್ರೀತ್ ಬಂಧಿಸಿ ಮುಂಬೈಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ನಿಸಾರ್ ತಂಬೋಲಿ ತಿಳಿಸಿದರು.
2006ರಲ್ಲೇ ಗುರ್‌ಪ್ರೀತ್ ವಿರುದ್ಧ ರೆಡ್ ಕಾರ್ನರ್ ನೊಟೀಸು ದಾಖಲಾಗಿತ್ತು. ಬುಲ್ಲಾರ್ ಶಕೀಲ್ ಗ್ಯಾಂಗಿನ ಪ್ರಮುಖ ನಿಷ್ಣಾತ ಬಂದೂಕು ಧಾರಿಯಾಗಿದ್ದ. ಅಲ್ಲದೆ ನಗರದಲ್ಲಿ ಹಲವು ಪ್ರಕರಣಗಳಲ್ಲಿ ಪೋಲೀಸರಿಗೆ ಬೇಕಾದವನಾಗಿದ್ದ. ಈತನ ವಿರುದ್ಧ ಹಲವು ಕೊಲೆ ಪ್ರಕರಣಗಳೂ, ಕೊಲೆ ಯತ್ನ ಪ್ರಕರಣಗಳೂ ದಾಖಲಾಗಿದ್ದವು. ಪೊಲೀಸ್ ಇನ್ಸ್‌ಪೆಕ್ಟರ್ ಶಾಲಿನಿ ಶರ್ಮಾ, ದಿಲೀಪ್ ಕಾಳೆ ಹಾಗೂ ಪ್ರಶಾಂತ್ ಮಾರ್ಡೆ ಅವರು ಬ್ಯಾಂಕಾಕ್‌ಗೆ ತೆರಳಿ ಈ 31ರ ಹರೆಯದ ಭುಲ್ಲಾರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಹೇಳುವಂತೆ, ಭುಲ್ಲಾರ್ 2006ರ ನವೆಂಬರ್ ತಿಂಗಳಲ್ಲಿ ಥಾಯ್ಲ್ಯಾಂಡ್ ಪೊಲೀಸರಿಂದಲೂ ಬಂಧನಕ್ಕೊಳಗಾಗಿದ್ದ. ಭಾರತೀಯ ಮೂಲದ ಸಯ್ಯದ್ ರೆಹಮಾನ್ ಎಂಬವರನ್ನು 2003ರ ಮೇ ತಿಂಗಳಲ್ಲಿ ಕೊಲೆ ಯತ್ನ ಮಾಡಿದ ಹಿನ್ನೆಲೆಯಲ್ಲಿ ಭುಲ್ಲಾರ್ ಬಂಧನಕ್ಕೆ ಒಳಗಾಗಿದ್ದ. ತನಿಖೆಯ ಮೂಲಕ ಭುಲ್ಲಾರ್ ಥಾಯ್ಲ್ಯಾಂಡಿನಲ್ಲೇ ಇಕ್ಬಾಲ್ ಎಂಬ ಸುಳ್ಳು ನಾಮಧೇಯದೊಂದಿಗೆ ವಾಸಿಸುತ್ತಿದ್ದ. ಜತೆಗೆ ಆತ ನಕಲಿ ಪಾಸ್‌ಪೋರ್ಟ್‌ಗಳು ಹಾಗೂ ಇತರ ದಾಖಲೆಗಳನ್ನು ಮಾಡಿಸಿಕೊಂಡಿದ್ದ ಎಂಬ ವಿಚಾರ ಬಯಲಿಗೆ ಬಂದಿದೆ. |