ಚುನಾವಣೆಯ ತಾಪ ಮುಗಿದು ಸರ್ಕಾರ ರಚನೆಯ ಕಾಲ ಸನ್ನಿಹಿತವಾಗುತ್ತದೆ ಎಂಬ ಕ್ಷಣದಲ್ಲಿ ರಾಜಕೀಯದಲ್ಲಿ ಈವರೆಗೆ ವಾಗ್ವಾದದ ಕೆಸರೆರಚಾಟ ಮಾಡಿದ್ದರೂ ಒಬ್ಬರನ್ನೊಬ್ಬರು ಕ್ಷಮಿಸುತ್ತಾರೆ. ಸ್ನೇಹಿತರಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಅಮರ್ ಸಿಂಗ್ ಹಾಗೂ ದಿಗ್ವಿಜಯ್ ಸಿಂಗ್ ಪ್ರಕರಣ.ಹಿಂದೆ ಭಾಯೀ ಭಾಯಿ ಎಂದಿದ್ದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಬೈ ಬೈ ಹೇಳಿ ಕಾಲವಾಯಿತು. ಈಗ ಆ ಕೋಪ ತಾಪವೆಲ್ಲ ಶಮನವಾಗಿದೆ. ಹಾಗಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸಮಾಜವಾದಿ ಮುಖಂಡ ಅಮರ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ತಾನು ಆಡಿದ ತಪ್ಪು ನುಡಿಗಳಿಗೆ ಕ್ಷಮಾಪಣೆ ಕೇಳಿದ್ದಾರೆ. ಅಮರ್ ಸಿಂಗ್ ದಿಗ್ವಿಜಯರನ್ನು ಕ್ಷಮಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಮರ್ ಸಿಂಗ್, ದಿಗ್ವಿಜಯ್ ಅವರು ಚುನಾವಣಾ ಪ್ರಚಾರದ ವೇಳೆ ತಪ್ಪು ಮಾತನಾಡಿದ್ದರು. ಹೀಗಾಗಿ ನ್ನ ಬಗ್ಗೆ ತಪ್ಪು ಮಾತನಾಡಿದ್ದಕ್ಕೆ ಅವರು ನನಗೆ ಮಧ್ಯಾಹ್ನ ಫೋನ್ ಮಾಡಿ ಸಾರಿ ಎಂದರು. ನನಗೆ ದಿಗ್ವಿಜಯ್ ಒಬ್ಬ ಹಿರಿಯಣ್ಣ ಇದ್ದಂತೆ. ಹಾಗಾಗಿ ನಾನು ಅವರ ತಪ್ಪನ್ನು ಕ್ಷಮಿಸಿಬಿಟ್ಟೆ ಎಂದರು. ಆದರೂ, ಅವರು ನನ್ನನ್ನು ವೈಯಕ್ತಿಕವಾಗಿ ಚುನಾವಣಾ ಪ್ರಚಾರದ ವೇಳೆ ದೂರಿರಲಿಲ್ಲ. ರಾಜಕೀಯವಾಗಿ ಮಾತನಾಡಿದ್ದರು ಅಷ್ಟೆ ಎಂದೂ ಅಮರ್ ಸಿಂಗ್ ಸಮರ್ಥಿಸಿದರು.ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಕುರಿತಾಗಿ ಕೇಳಿದಾಗ ಅಮರ್ ಸಿಂಗ್, ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಚುನಾವಣಾ ಫಲಿತಾಂಶ ಹೊರಬೀಳುವವರೆಗೆ ಸಮಾಜವಾದಿ ಪಕ್ಷದ ಮುಂದಿನ ನಡೆ ಕುರಿತು ಸಾರ್ವಜನಿಕವಾಗಿ ಎಲ್ಲೂ ಮಾತನಾಡಬಾರದು ಎಂದು ತಾಕೀತು ಮಾಡಿದ್ದಾರೆ. ಹಾಗಾಗಿ ಈ ಕುರಿತು ನಾನು ಏನೂ ಹೇಳಲಾರೆ. ಫಲಿತಾಂಶ ಬರಲಿ. ಆಮೇಲೆ ನಿರ್ಧಾರ ಮಾಡುತ್ತೇವೆ ಎಂದಷ್ಟೇ ಹೇಳಿದರು. |