ಹಳೆಯ ಸಂಬಂಧಕ್ಕೆ ಹೊಲಿಗೆ, ಹೊಸ ಸಂಬಂಧಕ್ಕೆ ಬೆಸುಗೆ ಹಾಕುವುದರಲ್ಲಿ ಮಗ್ನವಾಗಿರುವ ರಾಜಕೀಯ ವಲಯದಲ್ಲಿ, ಅತಂತ್ರ ಸಂಸತ್ತು ನಿರ್ಮಾಣವಾಗುವುದು ಬಹುತೇಕ ಖಚಿತವಾಗಿರುವುದರಿಂದ ಪ್ರಧಾನಿ ಅಭ್ಯರ್ಥಿಗಳ ಬಗೆಗೂ ಹೊಸ ಹೊಸ ಹೆಸರುಗಳು ಕೇಳಿಬರುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್.
ಸಂಯುಕ್ತ ಜನತಾ ದಳ (ಜೆಡಿ-ಯು) ನಾಯಕ ನಿತೀಶ್ ಅವರ 'ಜಾತ್ಯತೀತ' ಮುಖವೇ ಅವರನ್ನು ಸರ್ವ ಸಮ್ಮತ ಅಭ್ಯರ್ಥಿಯಾಗಿಸಿದ್ದು, ಇವರು ತೃತೀಯ ರಂಗಕ್ಕೆ, ಎಡರಂಗಕ್ಕೆ, ಎನ್‌ಡಿಎಗೆ ಮತ್ತು ಯುಪಿಎಗೂ ಸಲ್ಲುವ ವ್ಯಕ್ತಿಯಾಗಿರುವುದರಿಂದ ಯಾವುದೇ ಸಾಧ್ಯತೆಗಳನ್ನು ಕೂಡ ತಳ್ಳಿ ಹಾಕುವಂತಿಲ್ಲ.
ಯಾಕೆಂದರೆ ನಿತೀಶ್ ಕುಮಾರ್ ಅವರು ಎಸ್ಪಿಗೆ, ಬಿಎಸ್ಪಿಗೆ, ಎನ್‌ಸಿಪಿಗೆ, ಟಿಡಿಪಿ, ಎಐಎಡಿಎಂಕೆ, ಡಿಎಂಕೆ ಹೀಗೆ ಬಹುತೇಕ ಪಕ್ಷಗಳಿಗೆ 'ಇನ್ನೂ ಜಾತ್ಯತೀತ' ವರ್ಚಸ್ವೀ ನಾಯಕ. ಎಡಪಕ್ಷಗಳಿಗೂ ನಿತೀಶ್ ಪಥ್ಯವಾಗುತ್ತಾರೆ. ಅಂದರೆ ಬಿಜೆಪಿಯೇತರ ಮುಖಂಡನೊಬ್ಬ ತೃತೀಯ ರಂಗದ ಬೆಂಬಲ ಪಡೆದುಕೊಂಡು ಸರಕಾರದ ನೇತೃತ್ವ ವಹಿಸಿದಲ್ಲಿ, ಕಾಂಗ್ರೆಸ್ ಜೊತೆ ಹೋಗಲು ಇಚ್ಛಿಸದ ಬಿಎಸ್ಪಿ, ಎಸ್ಪಿ, ಟಿಡಿಪಿ, ಬಿಜೆಡಿ ಅಥವಾ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಮುಂತಾದವನ್ನು ಎನ್‌ಡಿಎಯತ್ತ ಸೆಳೆದುಕೊಳ್ಳಬಹುದು ಎಂಬುದು ಲೆಕ್ಕಾಚಾರ.
ಮತ್ತೊಂದು ರಣತಂತ್ರವೆಂದರೆ, ಕಾಂಗ್ರೆಸ್ ಅಧಿಕಾರಕ್ಕೇರದಂತೆ ಆಗಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬೆಂಬಲ ನೀಡಲು ಬಿಜೆಪಿ ಒಪ್ಪುವುದು. 2004ರ ಚುನಾವಣೆಗಳಲ್ಲಿ ಪವಾರ್ ಅವರು ಬಿಜೆಪಿಗೆ ತೀರಾ ಸಮೀಪ ಹೋಗಿದ್ದರು. ಶಿವಸೇನೆಯೊಳಗೆ ಕೂಡ ಪವಾರ್‌ಗೆ ಸಾಕಷ್ಟು ಬೆಂಬಲಿಗರಿದ್ದಾರೆ. ಯಾಕೆಂದರೆ ಮರಾಠನೊಬ್ಬ ಪ್ರಧಾನಿಯಾಗುವುದು ಅವರಿಗೂ ಹೆಮ್ಮೆ.
ಆದರೆ ಇದಕ್ಕೆ ತೊಡಕು ಸಾಕಷ್ಟಿದೆ. ಎಲ್.ಕೆ.ಆಡ್ವಾಣಿಯವರನ್ನೇ ಪ್ರಧಾನಮಂತ್ರಿ ಎಂದು ಬಿಂಬಿಸಿದ್ದ ಬಿಜೆಪಿಗೆ ಇಂಥ ಪರಿಸ್ಥಿತಿ ಊಹಿಸುವುದು ಸ್ವಲ್ಪ ಕಷ್ಟವಾದೀತು. 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಪಕ್ಷವೊಂದು ಕೇವಲ ಹತ್ತಿಪ್ಪತ್ತು ಸ್ಥಾನಗಳುಳ್ಳ ಪಕ್ಷವನ್ನು ಪ್ರಧಾನಿ ಪದವಿಗೆ ಬೆಂಬಲಿಸುವುದು ಅರಗಿಸಿಕೊಳ್ಳುವುದಕ್ಕೆ ಖಂಡಿತ ಕಷ್ಟವಾಗಬಹುದು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಕೂಡ ತಮ್ಮ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷೆಯನ್ನು ಜೀವಂತವಾಗಿರಿಸಿಕೊಂಡು ತೃತೀಯ ರಂಗದ ಸದಸ್ಯರು ಮತ್ತು ಕಾಂಗ್ರೆಸ್ಸೇತರ, ಬಿಜೆಪಿಯೇತರ ಪಕ್ಷಗಳೊಂದಿಗೆ ಸಂಪರ್ಕ ಏರ್ಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.
ಅತ್ತ ಆಂಧ್ರಪ್ರದೇಶದಲ್ಲಿ ಹೇಗೂ ವಿಧಾನಸಭೆ ಚುನಾವಣೆಗಳು ನಡೆದಿವೆ. ಮುಖ್ಯಮಂತ್ರಿ ಪದವಿಯನ್ನು ವೈ.ಎಸ್.ರಾಜಶೇಖರ ರೆಡ್ಡಿಯಿಂದ ಕಸಿದುಕೊಂಡು, ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಕ್ಷಕ್ಕೆ ಕೊಟ್ಟು, ಅದಕ್ಕೆ ಪ್ರತಿಯಾಗಿ ಕೇಂದ್ರದಲ್ಲಿ ಪ್ರಜಾ ರಾಜ್ಯಂ ಮತ್ತು ಅದರ ಮಿತ್ರರ ಬೆಂಬಲ ತೆಗೆದುಕೊಳ್ಳುವ ಹುನ್ನಾರವೂ ಒಂದುಕಡೆಯಿಂದ ನಿಧಾನವಾಗಿ ನಡೆಯುತ್ತಿದೆ.
ಇತ್ತ ತೃತೀಯ ರಂಗದ ಮಿತ್ರ ಪಕ್ಷಗಳು, ಈ ಒಕ್ಕೂಟದಿಂದ ಹೊರಬರುವುದಕ್ಕೆ ಒಂದೊಂದು ನೆಪವನ್ನು ಹುಡುಕುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಟಿಆರ್ಎಸ್ ಈಗಾಗಲೇ ಹೊರಬಂದಿದ್ದರೆ, ಜೆಡಿಎಸ್ ಕೂಡ ಕುಮಾರಸ್ವಾಮಿ ಮುಂದಾಳುತ್ವದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾರನ್ನು ಭೇಟಿಯಾಗಿ ಕುತೂಹಲ ಹುಟ್ಟಿಸಿದೆ.
ಒಟ್ಟಿನಲ್ಲಿ ಏನೂ ಘಟಿಸಬಹುದಾದ ದಿನಗಳು ಮುಂದಿವೆ. |