ಪ್ರೇಮ ಕುರುಡಂತೆ. ಆದರೆ ಇಲ್ಲಿ ಪ್ರೇಮಿಗಳೂ ಕುರುಡರು. ಆದರೂ ತಮ್ಮ ಪ್ರೇಮ ಮಾತ್ರ ಅಜರಾಮರ ಎಂಬುದನ್ನು ಪ್ರೇಮಿಸಿ 20 ವರ್ಷಗಳ ನಂತರ ಸಾಧಿಸಿ ತೋರಿಸಿದ್ದಾರೆ.
ಕೃಷ್ಣಸ್ವಾಮಿ ಹಾಗೂ ತಂಕಮ್ಮ ಇಬ್ಬರೂ ಪ್ರೀತಿಸಲು ಶುರುಮಾಡಿ ಬರೋಬ್ಬರಿ ಎರಡು ದಶಕಗಳೇ ಸಂದಿವೆ. 20 ವರ್ಷಗಳ ಸುದೀರ್ಘ ಕಾಲದ ಕಾಯುವಿಕೆಯ ನಂತರ ಇವರಿಬ್ಬರೂ ಮದುವೆಯಾಗಿದ್ದಾರೆ. ಎರ್ನಾಕುಲಂ ಜಿಲ್ಲೆಯ ಪರವೂರು ಎಂಬಲ್ಲಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಇವರಿಬ್ಬರೂ ಸಾಂಪ್ರದಾಯಿಕವಾಗಿ ವಿವಾಹ ಜೀವನಕ್ಕೆ ಅಡಿಯಿಟ್ಟರು.
ವಿಶೇಷವೆಂದರೆ ಈ ಇಬ್ಬರೂ ತಮ್ಮ ಪದವಿ ಶಿಕ್ಷಣದ ವೇಳೆ ತ್ರಿಶೂರಿನ ರಾಮವರ್ಮ ಕಾಲೇಜಿನಲ್ಲಿ ಭೇಟಿಯಾಗಿದ್ದರು. ಭೇಟಿ ಪ್ರೇಮಕ್ಕೆ ತಿರುಗಿತ್ತು. ಆದರೂ ತಾವಿಬ್ಬರೂ ತಮ್ಮ ತಮ್ಮ ಕಾಲ ಮೇಲೆ ನಿಂತ ಮೇಲಷ್ಟೇ ಮದುವೆಯಾಗುವುದು ಎಂಬ ನಿರ್ಧಾರಕ್ಕೆ ಬಂದ ಇವರು, ಉತ್ತಮ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ತೀರ್ಮಾನಿಸಿದ್ದರು. ಎಲ್ಲ ಪ್ರಯತ್ನಗಳೂ ವಿಫಲವಾಗಿ ಕೊನೆಗೂ ಸರ್ಕಾರಿ ಕೆಲಸ ಸಿಕ್ಕಲಿಲ್ಲ. ಅದಕ್ಕಾಗಿ ಕಾಲ ಕಳೆದು ಹೈರಾಣಾದ ಮೇಲೆ ಹೊಟ್ಟಗಾಗಿ ರೈಲಿನಲ್ಲಿ ಕಡ್ಲೆಕಾಯಿ ಮಾರಲು ಕೃಷ್ಣಸ್ವಾಮಿ ನಿರ್ಧರಿಸಿದರು.
ಈಗ ಅವರ ಕೆಲಸ ಕಡ್ಲೆಕಾಯಿ ಮಾರುವುದು. ಕಡ್ಲೆಕಾಯಿ ಮಾರಾಟದಿಂದಲೂ ಜೀವನ ಸಾಗಿಸಬಹುದು ಎಂಬುದೀಗ ಹಲವು ವರ್ಷಗಳ ನಂತರ ತಿಳಿದು ಬಂತು. ಹಾಗಾಗಿ ಇವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಇಂದಿಗೆ ಇವರಿಗೆ ಪ್ರೇಮ ಅಂಕುರವಾಗಿ 20 ವರ್ಷಗಳೇ ಸಂದಿವೆ. ಹೀಗಾಗಿ ಪ್ರೇಮಿಗಳಲ್ಲಿ ತಮ್ಮ ಪ್ರೇಮ ಸಫಲವಾದ ಅನೂಹ್ಯ ಖುಷಿ ಚಿಗುರೊಡೆದಿತ್ತು. |