ಲೋಕಸಭಾ ಮಹಾಸಮರದ ಜನಾದೇಶ ಸ್ಪಷ್ಟವಾಗಿ ಹೊರಬೀಳುವ ಮುನ್ನವೇ ಅಧಿಕಾರ ಗದ್ದುಗೆ ಏರುವ ನಿಟ್ಟಿನಲ್ಲಿ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರದಲ್ಲಿ ರಾಜಕೀಯ ಮುಖಂಡರು ತೊಡಗಿದ್ದು, ಬಿಜೆಪಿ 150ಕ್ಕಿಂತ ಹೆಚ್ಚು ಸೀಟುಗಳಿಸಿದ್ದಲ್ಲಿ ಮಾತ್ರ ಮುಂದಿನ ಮಾತುಕತೆ ನಡೆಸಲು ತಾನು ಸಿದ್ದ ಎಂದು ತಮಿಳುನಾಡಿನ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಬಹಿರಂಗವಾಗಿ ಘೋಷಿಸಿದ್ದಾರೆ.ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಹೆಚ್ಚಿನ ಸೀಟುಗಳನ್ನು ಬಾಚಿಕೊಳ್ಳಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ. ಅಲ್ಲದೇ ಈ ಮೊದಲು ಎನ್‌ಡಿಎ ಕೂಟದಲ್ಲಿದ್ದ ಜಯಲಲಿತಾ ಅವರು ಈ ಬಾರಿಯೂ ಕೂಡ ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ನೀಡಲಿ ಎಂಬ ನಿರೀಕ್ಷೆ ಹೊಂದಿದೆ. ಆದರೆ ಜಯಲಲಿತಾ ಅವರು ತಮ್ಮ ಬೆಂಬಲ ಯಾರತ್ತ ಎಂಬ ನಿರ್ಧಾರವನ್ನು ಈ ಮೊದಲು ಸ್ಪಷ್ಟಪಡಿಸಿಲ್ಲವಾಗಿತ್ತು. ಇದೀಗ ಬಿಜೆಪಿಗೆ ತಮ್ಮ ಸ್ಪಷ್ಟ ಸಂದೇಶವನ್ನು ರವಾನಿಸಿರುವ 'ಅಮ್ಮ', ಬಿಜೆಪಿ 150 ಸೀಟುಗಳನ್ನು ಪಡೆದಲ್ಲಿ ಮಾತ್ರ ಎಐಎಡಿಎಂಕೆ ಬೆಂಬಲ ನೀಡುವ ಕುರಿತು ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.ಫಲಿತಾಂಶದ ನಂತರ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಬುಧವಾರ ದೆಹಲಿಯಲ್ಲಿ ನಡೆದ ಪುನರ್‌ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಜಯಲಲಿತಾ ಅವರೊಂದಿಗೆ 'ವ್ಯವಹಾರ' ಕುದುರಿಸುವ ಹೊಣೆ ಹೊತ್ತುಕೊಂಡಿದ್ದಾರೆ. ಅದರಂತೆ ಈ ಬಾರಿಯೂ ಜಯಲಲಿತಾ ಅವರು ಕಾಂಗ್ರೆಸ್ ಜತೆ ಸಖ್ಯ ಬೆಳೆಸದೆ, ಬಿಜೆಪಿಗೆ ತಮ್ಮ ಬೆಂಬಲ ನೀಡಲಿದ್ದಾರೆ ಎಂಬ ಆಶಾಭಾವವನ್ನು ಮೋದಿ ವ್ಯಕ್ತಪಡಿಸಿದ್ದಾರೆ.ತಮಿಳುನಾಡಿನಲ್ಲಿ ಎಐಎಡಿಎಂಕೆ ಈ ಬಾರಿ ಹೆಚ್ಚಿನ ಸೀಟುಗಳನ್ನು ಪಡೆಯಲಿದೆ ಎಂದು ಮೋದಿ ಭವಿಷ್ಯ ನುಡಿದಿದ್ದಾರೆ. ಇವೆಲ್ಲದಕ್ಕೂ ಇದೀಗ ಮತಎಣಿಕೆ ಆರಂಭವಾಗಿದ್ದು, ಜನಾದೇಶದ ಸ್ಪಷ್ಟ ತೀರ್ಪು ಹೊರಬಿದ್ದ ನಂತರ ಕೊಡು-ಕೊಳ್ಳುವಿಕೆಗೊಂದು ಖದರು ಬರಲಿದೆ. |