ಮತ ಎಣಿಕೆಯ ತಳಮಳ ಆರಂಭವಾಗಿರುವಂತೆಯೇ ಕೇಂದ್ರ ಸರಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಲಿರುವ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಶರದ್ ಯಾದವ್, ನವೀನ್ ಪಟ್ನಾಯಕ್ ನಡುವೆ ಶುಕ್ರವಾರ ರಾತ್ರಿಯಿಂದೀಚೆಗೆ ನಡೆದ ದೂರವಾಣಿ ಮಾತುಕತೆಗಳು ಯಾರು ಯಾರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸಿದರು ಎಂಬ ಕುರಿತು ಗೊಂದಲ ಮೂಡಿಸಿದೆ.
ಶುಕ್ರವಾರ ರಾತ್ರಿ ಇತ್ತೀಚೆಗಷ್ಟೇ ಎನ್‌ಡಿಎ ಸಂಬಂಧ ಕಳಚಿಕೊಂಡು ಹೊರಬಂದಿದ್ದ ಬಿಜೆಡಿ ಮುಖಂಡ, ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ.
ಇವರಿಬ್ಬರ ನಡುವೆ ಮಾತುಕತೆ ಸಂದರ್ಭ ಉಭಯ ನಾಯಕರೂ ಪರಸ್ಪರರ ಬೆಂಬಲ ಕೋರಿದರು ಎಂದು ಅಂದಾಜಿಸಲಾಗಿದೆ.
ಇನ್ನೊಂದೆಡೆಯಿಂದ ನಿತೀಶ್ ಕುಮಾರ್ ಅವರು ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರಿಗೆ ದೂರವಾಣಿ ಕರೆ ಮಾಡಿದ್ದು, ತೃತೀಯ ರಂಗದ ಅವಕಾಶದ ಬಗ್ಗೆ ನೋಡುವಂತೆ ನಾಯ್ಡು ಅವರು ನಿತೀಶ್‌ಗೆ ಕೋರಿದ್ದಾರೆ. ಆದರೆ ಎನ್‌ಡಿಎ ಬೆಂಬಲಿಸುವಂತೆ ನಿತೀಶ್ ಅವರು ನಾಯ್ಡುಗೆ ಒತ್ತಾಯಿಸಿದರೇ ಎಂಬುದು ಖಚಿತವಾಗಿಲ್ಲ.
ಮತ್ತೊಂದೆಡೆಯಿಂದ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಕೂಡ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದರ ಮಧ್ಯೆ, ಜೆಡಿಯು ನೇತಾರ ಶರದ್ ಯಾದವ್ ಅವರು ಕೂಡ ಚಂದ್ರಬಾಬು ನಾಯ್ಡುರನ್ನು ಸಂಪರ್ಕಿಸಿದ್ದಾರೆ.
ಈ ಮಾತುಕತೆಗಳ ಮಧ್ಯೆ, ಎಡಪಕ್ಷಗಳು ಕೂಡ ನಿತೀಶ್ ಕುಮಾರ್ ಪ್ರಧಾನಿಯಾದರೆ ಅಭ್ಯಂತರವಿಲ್ಲ ಎಂಬ ಹೇಳಿಕೆ ನೀಡಿದ್ದು, ನಿತೀಶ್ ಕುಮಾರ್ ಅವರು ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದರೂ ಅಚ್ಚರಿಪಡಬೇಕಿಲ್ಲ. |