ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮುಂದಿನ ಸರ್ಕಾರ ರಚನೆಯ ರೂಪುರೇಷೆಯನ್ನು ಚರ್ಚಿಸಲು ಮಾಜಿ ನ್ಯಾಯವಾದಿ ಜನರಲ್ ಅಶೋಕ್ ದೇಸಾಯಿ ಅವರನ್ನು ಭೇಟಿಯಾಗಲಿದ್ದಾರೆ. ಮಾತುಕತೆ ಇಂದು ಸಂಜೆ ಐದು ಗಂಟಗೆ ನಡೆಯಲಿದ್ದು, ಆ ಸಮಯದೊಳಗೆ ಚುನಾವಣಾ ಫಲಿತಾಂಶವೂ ಹೊರಬೀಳುವ ನಿರೀಕ್ಷೆಯಿದೆ.ಈ ಬಾರಿಯ ಚುನಾವಣಾ ಫಲಿತಾಂಶ ಅಷ್ಟು ಸುಲಭದ ತುತ್ತಲ್ಲ. ಸರ್ಕಾರ ರಚನೆಗೆ ವಿವಿಧ ರಾಜಕೀಯ ಪಕ್ಷಗಳು ಸರ್ಕಸ್ಸು ನಡೆಸಲೇ ಬೇಕು. ಹೀಗಾಗಿ ಪ್ರಧಾನ ಮಂತ್ರಿಯ ಆಯ್ಕೆ ಮಾಡುವ ಕಠಿಣ ಸವಾಲೂ ರಾಷ್ಟ್ರಪತಿಯವರ ಎದುರಿಗಿದೆ.ರಾಷ್ಟ್ರಪತಿ ಭವನದ ಮೂಲಗಳ ಪ್ರಕಾರ, ಈಗಾಗಲೇ ರಾಷ್ಟ್ರಪತಿಗಳು ಈ ಬಗ್ಗೆ ಚರ್ಚೆ ನಡೆಸಿದ್ದರೂ, ಫಲಿತಾಂಶ ಹೊರಬೀಳದೆ ನಿಖರವಾಗಿ ಚರ್ಚಿಸಲು ಸಾಧ್ಯವಾಗಿಲ್ಲ. ಫಲಿತಾಂಶ ಹೊರಬಿದ್ದ ತಕ್ಷಣವೇ ಹಲವು ತಜ್ಞರ ಜತೆಗೆ ರಾಷ್ಟ್ರಪತಿಗಳು ಚರ್ಚಿಸಲಿದ್ದಾರೆ. ಮತದಾನೋತ್ತರ ಸಮೀಕ್ಷೆಯ ಪ್ರಕಾರ ಯುಪಿಎ ಸರ್ಕಾರ ರಚಿಸುವಷ್ಟು ಬಹುಮತ ಪಡೆಯುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ರಾಷ್ಟ್ರಪತಿಗಳು ಸರ್ಕಾರ ರಚನೆಗೆ ಪಕ್ಷಗಳಿಗೆ ಆಹ್ವಾನ ನೀಡುವ ಬಗ್ಗೆಯೂ ಸಾಕಷ್ಟು ತಯಾರಿಯನ್ನು ನಡೆಸಬೇಕಿದೆ.ಚುನಾವಣಾ ತಜ್ಞರ ಪ್ರಕಾರ, ಸರ್ಕಾರ ರಚಿಸಲು ರಾಷ್ಟ್ರಪತಿಗಳು ಪಕ್ಷಗಳನ್ನು ಆಹ್ವಾನ ಮಾಡಲು ಇಂಥದ್ದೇ ಎಂಬ ನಿಖರವಾದ ನಿಯಮಗಳಿಲ್ಲ. ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷವನ್ನೇ ಮೊದಲು ಆಹ್ವಾನಿಸಬೇಕು ಎಂಬ ನಿಯಮವೇ ಸಂವಿಧಾನದಲ್ಲಿ ಇಲ್ಲ. ರಾಷ್ಟ್ರಪತಿಗಳು ಯಾವುದೇ ಒಂದು ಪಕ್ಷವನ್ನು ಸರ್ಕಾರ ರಚಿಸಲು ಆಮಂತ್ರಣ ನೀಡಬಹುದು.ಆದರೂ ರಾಷ್ಟ್ರಪತಿಗಳು ಅತಿ ಹೆಚ್ಚು ಸೀಟುಗಳನ್ನು ಪಡೆದ ಒಂದು ಪಕ್ಷವನ್ನು ಮಾತ್ರ ಸರ್ಕಾರ ರಚನೆಗೆ ಕರೆಯುವುದು ಸಾಮಾನ್ಯ. ಅಲ್ಲದೆ, ಸಣ್ಣ ಪಕ್ಷವನ್ನೂ ಸರ್ಕಾರ ರಚಿಸಲು ರಾಷ್ಟ್ರಪತಿ ಕರೆಯಬಹುದು. ಆದರೆ, ರಾಷ್ಟ್ರಪತಿಯವರಿಗೆ ಈ ಸಣ್ಣ ಪಕ್ಷ ತನ್ನ ಬಹುಮತ ಸಾಬೀತು ಪಡಿಸಬಹುದೆಂಬ ನಂಬಿಕೆ ಇದ್ದರೆ ಮಾತ್ರ ರಾಷ್ಟ್ರಪತಿಗಳು ಈ ಅವಕಾಶ ನೀಡಬಹುದು ಎನ್ನುತ್ತಾರೆ. |