ರಾಷ್ಟ್ರರಾಜಕಾರಣದಲ್ಲಿ ಯುಪಿಎ ಮೈತ್ರಿಕೂಟಕ್ಕೆ ಜನಾದೇಶ ದೊರೆತಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಗಾಗಿ ಈಗಾಗಲೇ ಕಸರತ್ತು ಆರಂಭವಾಗಿದೆ. ಯುಪಿಎ ಮೈತ್ರಿಕೂಟ 261ಸೀಟುಗಳನ್ನು ಹೊಂದಿದ್ದು, ಅಧಿಕಾರ ಗದ್ದುಗೆಗಾಗಿ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 272ಕ್ಕೆ ಸಮಾಜವಾದಿ ಪಕ್ಷ, ಎಡರಂಗ ಎಲ್ಲವನ್ನೂ ಹೊರಗಿಡುವುದಾಗಿ ಹೇಳಿರುವ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳತ್ತ 'ಕೈ'ಚಾಚಿದೆ. ಕೇಂದ್ರದ ಅಧಿಕಾರ ಗದ್ದುಗೆ ಏರಲು ಯುಪಿಎಗೆ 11ಸೀಟುಗಳ ಕೊರತೆ ಇದ್ದು, ಅದಕ್ಕಾಗಿ ಆರ್‌ಎಲ್‌ಡಿ, ಜೆಡಿಎಸ್ ಸೇರಿದಂತೆ ಕೆಲವು ಪ್ರಾದೇಶಿಕ ಪಕ್ಷ, ಪಕ್ಷೇತರರ ಜತೆ ಮಾತುಕತೆ ನಡೆಸುವತ್ತ ಕಾಂಗ್ರೆಸ್ ಕಾರ್ಯಪ್ರವೃತ್ತವಾಗಿದೆ. 2004ರಲ್ಲಿ ಯುಪಿಎಗೆ ಬೆಂಬಲ ನೀಡಿದ್ದ ಎಡಪಕ್ಷಗಳಿಂದ ಸಾಕಷ್ಟು ಬಿಕ್ಕಟ್ಟು ಅನುಭವಿಸಿತ್ತು. ಅಲ್ಲದೇ ಸಮಾಜವಾದಿ ಪಕ್ಷವನ್ನೂ ಕೂಡ ಕಾಂಗ್ರೆಸ್ ಹತ್ತಿರಕ್ಕೆ ಸೇರಿಸದಿರಲು ನಿರ್ಧರಿಸಿದೆ. ಎರಡು ದಿನದಲ್ಲಿ ನೂತನ ಸರ್ಕಾರ ರಚನೆ: ಕೇಂದ್ರದಲ್ಲಿ ನೂತನ ಸರ್ಕಾರ ರಚಿವತ್ತ ಸಿದ್ದತೆ ನಡೆಸುತ್ತಿರುವ ಯುಪಿಎ,ಹಾಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಇನ್ನೆರಡು ದಿನದಲ್ಲಿ ನೂತನ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಪ್ರಧಾನಿ ಡಾ.ಸಿಂಗ್ ಹಾಗೂ ಕ್ಯಾಬಿನೆಟ್‌ನ ಸಚಿವರು ಸೋಮವಾರ ರಾಜೀನಾಮೆ ನೀಡುವ ಸಾಧ್ಯತೆ ಇರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸರ್ಕಾರ ರಚನೆಯ ಹಿನ್ನೆಲೆಯಲ್ಲಿ ಪ್ರಧಾನಿ ಡಾ.ಸಿಂಗ್ ಅವರು ಪಕ್ಷದ ವರಿಷ್ಠೆ ಸೋನಿಯ ಗಾಂಧಿ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.ಕೇಂದ್ರ ಸಚಿವ ಎ.ಕೆ.ಆಂಟನಿ, ಅರ್ಜುನ್ ಸಿಂಗ್, ಕಪಿಲ್ ಸಿಬಲ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಆಕೆಯ ಪುತ್ರ, ಸಂಸದ ಸಂದೀಪ್, ಅಹ್ಮದ್ ಪಟೇಲ್, ಗುಲಾಂ ನಬೀ ಅಜಾದ್, ಆಸ್ಕರ್ ಫೆರ್ನಾಂಡಿಸ್, ಮಾಜಿ ಗೃಹಸಚಿವ ಶಿವರಾಜ್ ಪಾಟೀಲ್ ಇಂದು ಕಾಂಗ್ರೆಸ್ ವರಿಷ್ಠೆ ಸೋನಿಯಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. |