ಲೋಕಸಭಾ ಚುನಾವಣೆಯಲ್ಲಿ ಅಚ್ಚರಿಕರ ರೀತಿಯಲ್ಲಿ ಸೋಲನ್ನು ಕಾಣುವ ಮೂಲಕ ಇದೀಗ ಎನ್‌ಡಿಎ ನಾಯಕರಲ್ಲಿ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಪಿಲಿಭಿಟ್ ಕ್ಷೇತ್ರದ ಅಭ್ಯರ್ಥಿಯಾಗಿದ್ದ ವರುಣ್ ಗಾಂಧಿಯ ಪ್ರಚೋದನಾಕಾರಿ ಹೇಳಿಕೆ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾರತದ ಭವಿಷ್ಯದ ಪ್ರಧಾನಿ ಎಂದು ಬಿಂಬಿಸಿರುವುದೇ ಪಕ್ಷದ ಹೀನಾಯ ಸೋಲಿಗೆ ಕಾರಣ ಎಂದು ಎನ್‌ಡಿಎ ಸಂಚಾಲಕ ಶರದ್ ಯಾದವ್ ಕಿಡಿಕಾರಿದ್ದಾರೆ.ವರುಣ್ ಒಪ್ಪಲಿ, ಬಿಡಲಿ, ಆತನ ಹೇಳಿಕೆಯಿಂದಾಗಿಯೇ ಪಕ್ಷ ಭಾರೀ ಬೆಲೆ ತೆರಬೇಕಾಯಿತು ಎಂದಿರುವ ಯಾದವ್, ವರುಣ್ ಹೇಳಿಕೆ ಅಸಂವಿಧಾನಾತ್ಮಕವಾದದ್ದು. ಆತನ ಹೇಳಿಕೆ ದೇಶದ ಒಗ್ಗಟ್ಟಿಗೆ ಧಕ್ಕೆ ತರುವಂತಹದಾಗಿತ್ತು. ಆ ಕಾರಣದಿಂದಾಗಿಯೇ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಅಲ್ಲದೇ ಭವಿಷ್ಯದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಪಟ್ಟ ಅಲಂಕರಿಸಲಿದ್ದಾರೆ ಎಂದು ಎನ್‌ಡಿಎ ಬಿಂಬಿಸಿರುವುದು ಕೂಡ ಪಕ್ಷಕ್ಕೆ ಭಾರಿ ಹೊಡೆತ ನೀಡಿದೆ. ಇಬ್ಬಿಬ್ಬರು ಪ್ರಧಾನಿ ಅಭ್ಯರ್ಥಿಗಳ ಹೆಸರನ್ನು ತೇಲಿಬಿಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಿದ್ದು ಪ್ರಮಾದವಾಗಿದೆ ಎಂದರು.ಇಂತಹ ವಿಷಯಗಳೇ ಹಾಗೆ, ಜನರ ಮನಸ್ಸಲ್ಲಿ ಸಾಕಷ್ಟು ಗೊಂದಲವನ್ನು ಹುಟ್ಟುಹಾಕುತ್ತೆ. ಎಲ್.ಕೆ.ಆಡ್ವಾಣಿ ಪ್ರಧಾನಿ ಅಭ್ಯರ್ಥಿ ಎಂದು ಎನ್‌ಡಿಎ ಈ ಮೊದಲೇ ಒಮ್ಮತಾಭಿಪ್ರಾಯದಿಂದ ಸ್ಪಷ್ಟಪಡಿಸಿತ್ತು. ಆದರೆ ಮೋದಿ ಹೆಸರನ್ನು ಬಳಿಕ ಎಳೆದು ತರುವ ಮೂಲಕ ಗೊಂದಲ ಹುಟ್ಟುಹಾಕಿದರು ಎಂದು ಹೇಳಿದರು. |