ರಾಜಕೀಯದಲ್ಲಿ ಅಪರಾಧಿಕರಣವನ್ನು ತಡೆಯಬೇಕು ಎಂಬ ಏನೇ ಬೊಬ್ಬೆ ಕೇಳಿಬಂದರೂ 15ನೇ ಲೋಕಸಭೆಯಲ್ಲಿ ಕ್ರಿಮಿನಲ್‌ಗಳ ಪ್ರವೇಶದ ಸಂಖ್ಯೆಯಲ್ಲಿ ಶೇ.22ರಷ್ಟು ಏರಿಕೆಯಾಗಿದೆ.
ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣಪತ್ರಗಳ ವಿಶ್ಲೇಷಣೆಯ ಪ್ರಕಾರ, 2004ಕ್ಕೆ ಹೋಲಿಸಿದರೆ, ಈ ಸರ್ತಿ ಲೋಕಸಭೆ ಪ್ರವೇಶಿಸಿರುವ ಅಪರಾಧಿ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಶೇ.22ರಷ್ಟು ಏರಿಕೆಯಾಗಿದೆ.
ಹೊಸದಾಗಿ ಆಯ್ಕೆಯಾಗಿರುವ ಸುಮಾರು 150 ಸಂಸದರ ವಿರುದ್ಧ ಅಪರಾಧಿ ಪ್ರಕರಣಗಳು ಬಾಕಿ ಇವೆ. ಇವರಲ್ಲಿ 73 ಮಂದಿಯ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಗಂಭೀರ ಪ್ರಕರಣಗಳು ಬಾಕಿ ಇವೆ. ನ್ಯಾಶನಲ್ ಇಲೆಕ್ಷನ್ ವಾಚ್ ಈ ಪರಿಶೀಲನೆ ನಡೆಸಿದೆ. ಇದರ ಪ್ರಕಾರ ಬಿಜೆಪಿಯು ಗರಿಷ್ಠ ಸಂಖ್ಯೆಯ ಕ್ರಿಮಿನಲ್ ಸಂಸದರನ್ನು ಹೊಂದಿದ್ದು, ಅದರ ಸಂಖ್ಯೆ 42.
ಬಿಜೆಪಿಯ ನಂತರದ ಸ್ಥಾನ ಕಾಂಗ್ರೆಸ್‌ಗೆ ಸಲ್ಲುತ್ತಿದ್ದು, ಇದರ ಸಂಖ್ಯೆ 41. ಸಮಾಜವಾದಿ ಪಕ್ಷವು ತೃತೀಯ ಸ್ಥಾನ ಪಡೆದಿದ್ದು ಎಂಟು ಸಂಸದರನ್ನು ಹೊಂದಿದೆ. ಬಿಎಸ್ಪಿಯ ಸಂಖ್ಯೆ ಆರು.
ಅಪರಾಧ ಪ್ರಕರಣಗಳನ್ನು ಹೇರಿಕೊಂಡಿರುವವರಲ್ಲಿ ಸೋತಿರುವ ಪ್ರಮುಖರೆಂದರೆ, ಅಪ್ನಾ ದಳದ ಅತಿಕ್ ಅಹ್ಮದ್, ಜೆಡಿಯುವಿನ ವಿಜಯ್ ಶುಕ್ಲಾ, ಎಸ್ಪಿಯ ಮಿತ್ರಸೇನ್, ಹಾಗೂ ಸ್ವತಂತ್ರ ಅಭ್ಯರ್ಥಿ ಅಖಿಲೇಶ್ ಸಿಂಗ್.
|