ಈ ಬಾರಿ ಚುನಾವಣೆಯಲ್ಲಿ ವಿಜಯಿಯಾಗಿ ಸಂಸದ ಸ್ಥಾನಕ್ಕೆ ಪ್ರವೇಶ ಮಾಡಿದ ಹಲವರಿಗೆ ತಮ್ಮವೇತನ ಏರಿಕೆ ಬಗ್ಗೆ ದೊಡ್ಡ ಉತ್ಸಾಹವಿಲ್ಲ. ಏಕೆಂದರೆ ಚುನಾವಣೆಯಲ್ಲಿ ವಿಜಯಿಯಾಗಿ ಲೋಕಸಭೆಗೆ ಪ್ರವೇಶಿಸಿದ 300 ಮಂದಿ ಈ ಬಾರಿ ಕೋಟ್ಯಾಧಿಪತಿಗಳು. ಇದು ಕಳೆದ ಚುನಾವಣೆಗಿಂತ ಶೇ.95ರಷ್ಟು ಹೆಚ್ಚು!
ಚುನಾವಣಾ ಆಯೋಗಕ್ಕೆ ನೀಡಿದ ಆಸ್ತಿ ವಿವರಗಳ ಪ್ರಕಾರ, ಹೊಸ ಸದನದ ಶ್ರೀಮಂತ ಸಂಸದರೆಂದರೆ ಆಂಧ್ರದ ಖಮ್ಮಾಮ್ ಕ್ಷೇತ್ರದಿಂದ ಟಿಡಿಪಿ ಮೂಲಕ ಆಯ್ಕೆಯಾದ ನಮ್ಮ ನಾಗೇಶ್ವರ ರಾವ್. ಅವರ ಆಸ್ತಿ 173 ಕೋಟಿ ರೂಪಾಯಿಗಳು. ಇವರ ನಂತರದ ಸ್ಥಾನ ಕಾಂಗ್ರೆಸ್‌ನ ಕುರುಕ್ಷೇತ್ರದ ಸಂಸದರಾಗಿ ಆಯ್ಕೆಯಾದ ನವೀನ್ ಜಿಂದಾಲ್ ಅವರದ್ದು. ಜಿಂದಾಲ್ ಆಸ್ತಿ 131 ಕೋಟಿ ರೂಪಾಯಿಗಳು.
ಇವರ ನಂತರದ ಕೋಟ್ಯಾಧಿಪತಿ ಸ್ಥಾನದಲ್ಲಿ ಎಲ್. ರಾಜ್‌ಗೋಪಾಲ್(ಕಾಂಗ್ರೆಸ್), ಪ್ರಫುಲ್ ಪಟೇಲ್ (ಎನ್‌ಸಿಪಿ), ಸುಪ್ರಿಯಾ ಸುಲೆ (ಎನ್‌ಸಿಪಿ), ರಾಜಕುಮಾರಿ ರತ್ನಾ ಸಿಂಗ್ (ಕಾಂಗ್ರೆಸ್) ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರ ವೈ.ಎಸ್.ರಾಜಮೋಹನ ರೆಡ್ಡಿ ಇದ್ದಾರೆ. ಈ ಕೋಟ್ಯಧಿಪತಿ ಸಂಸದರ ಮಾಹಿತಿ ಕಲೆಹಾಕಿರುವುದು ನ್ಯಾಷನಲ್ ಎಲೆಕ್ಷನ್ ವಾಚ್ ಎಂಬ ರಾಷ್ಟ್ರೀಯ ಎನ್‌ಜಿಒ ಸಂಸ್ಥೆ.
ಅತಿ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿರುವ ಪಕ್ಷ ಕಾಂಗ್ರೆಸ್ ಆಗಿದ್ದು, ಇದರಲ್ಲಿ 137 ಮಂದಿ ಕೋಟ್ಯಧಿಪತಿಗಳಿದ್ದರೆ, ಬಿಜೆಪಿಯ 58 ಮಂದಿ, ಸಮಾಜವಾದಿ ಪಕ್ಷದ 14, ಬಿಎಸ್ಪಿಯ 13 ಮಂದಿ ಕೋಟ್ಯಾಧಿಪತಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ನಂತರದ ಸ್ಥಾನದಲ್ಲಿ ಡಿಎಂಕೆ, ಶಿವಸೇನಾಗಳಿವೆ.
ವಿಶೇಷವೆಂದರೆ, ಜೆಡಿಯು ಏಳನೇ ಅತಿ ದೊಡ್ಡ ಕೋಟ್ಯಧಿಪತಿಗಳ ಪಕ್ಷವಾಗಿ ಹೊರಹೊಮ್ಮಿದ್ದು, ನಂತರದ ಸ್ಥಾನದಲ್ಲಿ ಎನ್‌ಸಿಪಿ, ಬಿಜೆಡಿ ಹಾಗೂ ಟಿಡಿಪಿಗಳಿವೆ.
ರಾಜ್ಯಗಳ ಪೈಕಿ, ಉತ್ತರ ಪ್ರದೇಶ 52 ಕೋಟ್ಯಧಿಪತಿಗಳನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ, ಮಹಾರಾಷ್ಟ್ರ (37), ಆಂಧ್ರಪ್ರದೇಶ (31), ಕರ್ನಾಟಕ (25), ಬಿಹಾರ್ (17), ತಮಿಳುನಾಡು (17) ಹಾಗೂ ಮಧ್ಯಪ್ರದೇಶ (15), ಗುಜರಾತ್ (10) ಕೋಟ್ಯಾಧಿಪತಿಗಳಿದ್ದಾರೆ. ಈ ರಾಜ್ಯಗಳ ಹಿಂದೆ ಪಂಜಾಬ್, ರಾಜಸ್ಥಾನಗಳಿವೆ.
ನ್ಯಾಷನಲ್ ಎಲೆಕ್ಷನ್ ವಾಚ್‌ನ ಅನಿಲ್ ಬೈರ್ವಾಲ್ ಹೇಳುವಂತೆ, ಈ ಬಾರಿಯ ಚುನಾವಣೆಯಲ್ಲಿ ಬಹಳಷ್ಟು ಮಂದಿ ರಾಜಕಾರಣಿಗಳು ತಮ್ಮ ಹಣದ ಪ್ರಭಾವವನ್ನು ವಿಜಯಕ್ಕೆ ಬಳಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ. ಹಲವು ಹೊಸ ಅಭ್ಯರ್ಥಿಗಳು ಸಂಸದ ಸ್ಥಾನಕ್ಕೆ ಎಂಟ್ರಿ ಪಡೆಯಲು ಅವರ ಹಣದ ಪ್ರಭಾವವೂ ಕಾರಣವಿದೆ ಎನ್ನುತ್ತಾರೆ. |