ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರೇ ವಿಪಕ್ಷ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಘೋಷಿಸುವ ಮೂಲಕ ಈ ಕುರಿತು ಎದ್ದಿದ್ದ ಎಲ್ಲಾ ಊಹಾಪೋಹಗಳು ತಣ್ಣಗಾದಂತಾಗಿದೆ.
"ಭಾರತೀಯ ಜನತಾಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹಿನ್ನೆಡೆ ಕಂಡಿದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ಅದು ತನ್ನನ್ನು ತಾನು ಪುನರ್ನಿರ್ಮಿಸಿಕೊಳ್ಳುವ ಅವಶ್ಯಕತೆ ಇದೆ. ಈ ಸಂದರ್ಭಲ್ಲಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುವ ನಿರ್ಧಾರವನ್ನು ಕೈಬಿಡಲು ಆಡ್ವಾಣಿ ಅವರು ನಿರ್ಧರಿಸಿದ್ದಾರೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಸೋಮವಾರ ಬಿಜೆಪಿಯು ತನ್ನ ಸಂಸದೀಯ ಮಂಡಳಿ, ಪ್ರಧಾನ ಕಾರ್ಯದರ್ಶಿಗಳು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿತು.
ಆಡ್ವಾಣಿಯವರ ನಾಯಕತ್ವ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದ್ದು ಅವರನ್ನು 15ನೆ ಲೋಕಸಭೆಯ ವಿಪಕ್ಷ ನಾಯಕರಾಗಿ ಮುಂದುವರಿಯಲು ವಿನಂತಿಸಲಾಯಿತು ಎಂದು ಅವರು ತಿಳಿಸಿದರು.
ಶನಿವಾರ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ 81ರ ಹರೆಯದ ಆಡ್ವಾಣಿ ಅವರು ಹೊಸ ನಾಯಕನ ಆಯ್ಕೆಗೆ ಒತ್ತಾಯಿಸಿದ್ದರು. ಆದರೆ ಪಕ್ಷದ ಸಂಸದೀಯ ಮಂಡಳಿಯು ಆಡ್ವಾಣಿ ಅವರ ಸಲಹೆಯನ್ನು ನಿರಾಕರಿಸಿತ್ತು. ಬಳಿಕ ಸಭೆಯಲ್ಲಿ ಆಡ್ವಾಣಿ ಅವರ ಮನಒಲಿಸುವಂತೆ ರಾಜ್‌ನಾಥ್ ಸಿಂಗ್ ಅವರು ಪ್ರಯತ್ನಿಸಲು ನಿರ್ಧರಿಸಲಾಗಿತ್ತು. |