ಈ ಬಾರಿ ದಾಖಲೆಯ ಸಂಖ್ಯೆಯ ಮಹಿಳಾ ಸಂಸದರು ಲೋಕಸಭೆ ಪ್ರವೇಶಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷವೊಂದರಿಂದಲೇ 23 ಮಂದಿ ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2009ರ ಈ ಬಾರಿಯ ಚುನಾವಣೆಯಲ್ಲಿ 556 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ 59 ಮಂದಿಯನ್ನು ಜನರು ಆರಿಸಿ ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನಿಂದ ಅತಿ ಹೆಚ್ಚು ಮಹಿಳಾ ಸಂಸದರು ಆಯ್ಕೆಯಾಗಿದ್ದು, ಬಿಜೆಪಿಯಿಂದ 13 ಮಂದಿ ಆಯ್ಕೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್, ಸಮಾಜವಾದಿ, ಹಾಗೂ ಬಹುಜನ ಸಮಾಜ ಪಾರ್ಟಿಗಳಿಂದ ತಲಾ ನಾಲ್ಕು ಮಹಿಳಾ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ಜನತಾದಳ ಸಂಯುಕ್ತ, ಶಿರೋಮಣಿ ಅಕಾಲಿ ದಳ ಹಾಗೂ ಎನ್‌ಸಿಪಿಗಳಿಂದ ತಲಾ ಇಬ್ಬರು ಮಹಿಳೆಯರು ಸಂಸದರಾಗಿ ಲೋಕಸಭೆ ಹೊಕ್ಕರೆ, ತೆಲಂಗಾಣ ರಾಷ್ಟ್ರೀಯ ಸಮಿತಿ, ರಾಷ್ಟ್ರೀಯ ಲೋಕದಳ, ಶಿವಸೇನೆ, ಡಿಎಂಕೆ ಮತ್ತು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷಗಳಿಂದ ತಲಾ ಒಬ್ಬೊಬ್ಬ ಮಹಿಳೆ ಆಯ್ಕೆಯಾಗಿದ್ದಾರೆ.
2004ರ ಚುನಾವಣೆಯಲ್ಲಿ 355 ಮಹಿಳಾ ಅಭ್ರಯರ್ಥಿಗಳು ಕಣಕ್ಕಿಳಿದಿದ್ದು, ಅವರಲ್ಲಿ 45 ಅಭ್ಯರ್ಥಿಗಳು ಲೋಕಸಭೆಗೆ ಪ್ರವೇಶ ಪಡೆದಿದ್ದರು. 1999ರ ಚುನಾವಣೆಯಲ್ಲಿ 284 ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿ 49 ಮಂದಿ ಲೋಕಸಭೆಗೆ ಕಾಲಿಟ್ಟಿದ್ದರು.
ಉತ್ತರ ಪ್ರದೇಶ ಮಹಿಳಾ ಸಂಸದರಲ್ಲಿ ಮೇಲುಗೈ ಸಾಧಿಸಿದ್ದು, ಈ ರಾಜ್ಯವೊಂದರಿಂದಲೇ 13 ಮಹಿಳಾ ಅಭ್ರಯರ್ಥಿಗಳು ವಿಜಯಮಾಲೆ ಧರಿಸಿದ್ದಾರೆ. ನಂತರದ ಸ್ಥಾನ ಏಳು ಮಹಿಳಾ ಸಂಸದರನ್ನು ಆರಿಸಿರುವ ಪಶ್ಚಿಮ ಬಂಗಾಳಕ್ಕೆ. ಇನ್ನು ಉಳಿದಂತೆ, ಮಧ್ಯಪ್ರದೇಶದಲ್ಲಿ ಆರು, ಆಂಧ್ರಪ್ರದೇಶದಲ್ಲಿ ಐದು, ಗುಜರಾತ್, ಪಂಜಾಬ್, ಬಿಹಾರಗಳಲ್ಲಿ ತಲಾ ನಾಲ್ಕು ಮಹಿಳೆಯರು ಆರಿಸಿ ಬಂದಿದ್ದಾರೆ. |