ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬೇಷರತ್ ಬಾಹ್ಯ ಬೆಂಬಲ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಬಿಜೆಪಿ ವರಿಷ್ಠೆ ಮಾಯಾವತಿ ಮಂಗಳವಾರ ಘೋಷಿಸಿದ್ದಾರೆ. ಬಿಎಸ್ಪಿಯು 21 ಸಂಸದರ ಬಲವನ್ನು ಹೊಂದಿದೆ.
ಪಕ್ಷದ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣಾ ಫಲಿತಾಂಶಗಳು ಹೊರ ಬಿದ್ದ ದಿವಸ ತಾನು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಗಳನ್ನು ತಾನು ಅಭಿನಂದಿಸಿರುವುದಾಗಿ ಮಾಯವತಿ ತಿಳಿಸಿದ್ದಾರೆ.
ಭಾನುವಾರ ಸಂಜೆ ತನ್ನನ್ನು ಸಂಪರ್ಕಿಸಿರುವ ಪ್ರಧಾನಿಯವರು ಜಾತ್ಯತೀತ ಶಕ್ತಿಗಳನ್ನು ಬಲಪಡಿಸಲು ಸಕಾರಾತ್ಮಕ ಮನೋಭಾವ ಹೊಂದಬೇಕೆಂದು ನುಡಿದರೆಂದು ಅವರು ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಮಂಗಳವಾರ ಮುಂಜಾನೆ ಸಭೆ ಸೇರಿದ್ದು ಚರ್ಚಿಸಿದ ಬಳಿಕ ನೂತನ ಸರ್ಕಾರಕ್ಕೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದರು.
ಸಮಾಜವಾದಿಗಳಿಂದಲೂ ಬೆಂಬಲ ಈ ಮಧ್ಯೆ ಯುಪಿಎ ಸರ್ಕಾರ ಸೇರುವ ಇಂಗಿತ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷವು ತನ್ನ ಬೆಂಬಲವನ್ನು ಘೋಷಿಸಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಿ ಸರ್ಕಾರಕ್ಕೆ ಲಿಖಿತ ಬೆಂಬಲ ಘೋಷಿಸುವುದಾಗಿ ಪಕ್ಷದ ನಾಯಕ ಅಮರ್ ಸಿಂಗ್ ಹೇಳಿದ್ದಾರೆ.
|