'' ಕರ್ನಾಟಕವನ್ನು ನಿರ್ಲಕ್ಷಿಸಿ ಅಭಿವೃದ್ಧಿ ಕಾರ್ಯಗಳಿಗೆ ತಾರತಮ್ಯ ಅನುಸರಿಸಿದರೆ, ಎಚ್ಚರ!'' ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ, ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 19ನ್ನು ನಿರಾಯಾಸವಾಗಿ ತನ್ನ ಬುಟ್ಟಿಯೊಳಗೆ ಹಾಕಿರುವ ಬಿಜೆಪಿಯ ಸವಾಲಿನ ನುಡಿ.ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಆರು ಸೀಟು ಪಡೆಯುವ ಮೂಲಕ ಹೀನಾಯ ಫಲಿಂತಾಶ ದಾಖಲಿಸಿದರೂ, ಅಭಿವೃದ್ಧಿ ಕಾರ್ಯಗಳ ಸಂದರ್ಭ ಈ ಹಿಂದಿನಂತೆ ಮತ್ತೆ ಯುಪಿಎ ಸರ್ಕಾರ ಹೊಲಸು ರಾಜಕೀಯ ಮಾಡುವುದಿಲ್ಲ ಅಂದುಕೊಂಡಿದ್ದೇವೆ. ಅಭಿವೃದ್ಧಿ ಯೋಜನೆಗಳ ಸಂದರ್ಭ ರಾಜಕೀಯವನ್ನು ಎಳೆದು ತರುವುದು ನಮಗಿಷ್ಟವಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಮತ್ತೆ ಲೋಕಸಭಾ ಚುನಾವಣೆಯಲ್ಲೂ ಅತ್ಯುತ್ತಮ ಫಲಿತಾಂಶ ದಾಖಲಿಸುವುದು ರಾಜ್ಯ ಬಿಜೆಪಿಯ ಪಾಲಿಗೆ ದಾಖಲೆ ಎಂದು ಸದಾನಂದ ಗೌಡ ಹರ್ಷಭರಿತರಾಗಿ ನುಡಿದರು. ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಪದೇ ಪದೇ ಆಪಾದಿಸುತ್ತಿದ್ದ ಕಾಂಗ್ರೆಸ್‌ಗೆ ಈ ಲೋಕಸಭೆ ಚುನಾವಣೆಯಲ್ಲೂ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದೂ ಗೌಡ ಬಣ್ಣಿಸಿದರು.ರಾಷ್ಟ್ರೀಯವಾಗಿ ಕಾಂಗ್ರೆಸ್ ಅಲೆ ಇದ್ದರೂ, ವಿಧಾನಸಭೆ ಚುನಾವಣೆಯ ನಂತರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೇ ರಾಜ್ಯದ ಮತದಾರರು ಮತ ಚಲಾಯಿಸಿದ್ದಾರೆ. ಯಾಕೆ ಮತ್ತೆ ಬಿಜೆಪಿಗೇ ಒಟು ಮಾಡಿದಿರಿ ಎಂದು ಮತದಾರರನ್ನು ಕೇಳಿದರೆ, ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ, ಅಭಿವೃದ್ಧಿ ವಿಚಾರದಲ್ಲಿ ಯುಪಿಎ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿರುವುದು ಮತದಾರನಿಗೂ ಗೊತ್ತಿದೆ. ಅವರಿಂದ ಇದೇ ಉತ್ತರ ಬರುತ್ತದೆ. ಇಂತಹ ತಾರತಮ್ಯ ಮುಂದೆ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿಯುತ್ತಲೇ ಹೋದರೆ ಮುಂದಿನ ಚುನಾವಣೆಯ ಹೊತ್ತಲ್ಲಿ ಖಂಡಿತ ಕಾಂಗ್ರೆಸ್‌ನ್ನು ಜನ ನಿವಾಳಿಸಿ ಎಸೆಯುತ್ತಾರೆ ಎಂದು ಗೌಡ ಹೇಳಿದರು.ಈ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯ ನಿರಾಶಾದಾಯಕ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ ಸದಾನಂದ ಗೌಡ, ಈ ಸೋಲಿಗೆ ಬಿಜಿಪಿ ಹಾಗೂ ಮಿತ್ರಪಕ್ಷಗಳ ಕುರಿತು ಪರಾಮರ್ಶೆಯನ್ನು ರಾಷ್ಟ್ರೀಯ ನಾಯಕರು ನಡೆಸುತ್ತಿದ್ದಾರೆ ಎಂದರು.ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಸಂಸದರಾದ ಮೂವರು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಧರಂಸಿಂಗ್ ಹಾಗೂ ವೀರಪ್ಪ ಮೊಯಿಲಿ ಹಾಗೂ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರು ರಾಜ್ಯದ ಅಭಿವೃದ್ಧಿಯತ್ತ ದೃಷ್ಟಿ ಹರಿಸುತ್ತಾರೆ ಎಂದು ಭಾವಿಸಿದ್ದಾವೆ ಎಂದೂ ಹೇಳಿದರು. 2004 ರ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 18 ಕ್ಷೇತ್ರಗಳಲ್ಲಿ ವಿಜಯಮಾಲೆ ಧರಿಸಿತ್ತು. ಆಗ ಕಾಂಗ್ರೆಸ್ ಎಂಟು ಹಾಗೂ ಜೆಡಿಎಸ್ ಎರಡು ಸೀಟು ಪಡೆದಿದ್ದವು. ಈ ಬಾರಿ ಸದಾನಂದ ಗೌಡ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಅವರನ್ನು 27 ಸಾವಿರ ಮತಗಳಿಂದ ಸೋಲಿಸಿದ್ದರು. |