ಸತತವಾಗಿ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಪಕ್ಷವೊಂದು ವಿಜಯಮಾಲೆ ಧರಿಸುವ ಮೂಲಕ ಒರಿಸ್ಸಾದಲ್ಲಿ ದಾಖಲೆಗೈದಿರುವ ಬಿಜು ಜನತಾದಳ (ಬಿಜೆಡಿ) ನಾಯಕ ನವೀನ್ ಪಟ್ನಾಯಿಕ್ ಸ್ಪಷ್ಟಬಹುಮತ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಯಾವ ಪಕ್ಷದ ಸಹಕಾರವೂ ಇಲ್ಲದೆ ಅಧಿಕಾರ ಹಿಡಿಯಲಿದ್ದಾರೆ.147 ವಿಧಾನ ಸಭಾ ಸದಸ್ಯರಿರುವ ಒರಿಸ್ಸಾದಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಡಿ 100ಕ್ಕೂ ಮಿಕ್ಕಿ ಸೀಟುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಬಾರೀ ವಿಜಯದ ನಗೆ ಬೀರಿದೆ. ಈ ಮೊದಲು 1980 ಹಾಗೂ 1985ರಲ್ಲಿ ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೇರಿದರೆ, ನಂತರದ ದಿನಗಳಲ್ಲಿ ಜನತಾದಳ (1990), ಜನತಾ ಪಾರ್ಟಿ(1977) ಹಾಗೂ ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಅಧಿಕಾರ ಪಡೆದಿದ್ದವು.ಚುನಾವಣಾ ಲೆಕ್ಕಾಚಾರದ ಪ್ರಕಾರ ಈ ಬಾರಿ ಬಿಜೆಡಿ 103 ಸೀಟುಗಳು ಲಭ್ಯವಾಗುತ್ತವೆ ಎನ್ನಲಾಗಿತ್ತು.ನವೀನ್ ಅವರ ತಂದೆ ದಿ. ಬಿಜು ಪಟ್ನಾಯಿಕ್ ಅವರು 1977ರಲ್ಲಿ ತಮ್ಮ ಜನತಾ ಪಾರ್ಟಿ ಮೂಲಕ 110 ಸೀಟುಗಳನ್ನು ಗೆಲ್ಲುವ ಮೂಲಕ ಮೊದಲ ಬಾರಿ ಅಧಿಕಾರ ಹಿಡಿದಿದ್ದರು. ಲೋಕಸಭೆಗೂ ಚುನಾಯಿತರಾಗಿದ್ದ ಬಿಜು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದ ಕಾಲಯದಲ್ಲಿ ಸ್ಟೀಲ್ ಖಾತೆಯ ಮಂತ್ರಿಯೂ ಆಗಿದ್ದರು. 1961ರಲ್ಲಿ ಬಿಜು ಅವರ ನೇತೃತ್ವದಲ್ಲೇ ಕಾಂಗ್ರೆಸ್ 82 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದರು. |