ಒರಿಸ್ಸಾದ ರಕ್ಷಣಾ ನೆಲೆಯಲ್ಲಿ ಭಾರತವು ಮಂಗಳವಾರ ಮುಂಜಾನೆ ಅಣುಸಮರ್ಥ ಕ್ಷಿಪಣಿ ಅಗ್ನಿ-IIರ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು ಎಂದು ಅಧಿಕೃತ ಮೂಲಗಳು ಹೇಳಿವೆ.
2,000 ಕಿಲೋ ಮೀಟರ್ ದೂರ ಚಿಮ್ಮಬಲ್ಲ ಖಂಡಾಂತರ ಕ್ಷಿಪಣಿಯನ್ನು ಭದ್ರಕ್ ಜಿಲ್ಲೆಯ ಧಮಾರ ಸಮೀಪದ ವೀಲರ್ಸ್ ದ್ವೀಪದಲ್ಲಿ ಮುಂಜಾನೆ 10.06ಕ್ಕೆ ಹಾರಿಬಿಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
"ಅದು ಬಳಕೆದಾರರ ಪರೀಕ್ಷೆಯಾಗಿತ್ತು. ಸೇನೆಯು ತನ್ನಿಂತಾನೆ ಸ್ವಯಂ ಆಗಿ ಕ್ಷಿಪಣಿಯನ್ನು ಉಡಾಯಿಸಲು ಸನ್ನದ್ಧವಿದೆ ಎಂದು ಆತ್ಮವಿಶ್ವಾಸ ನೀಡುವ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ" ಎಂದು ಮೂಲಗಳು ಹೇಳಿವೆ.
ಭಾರತದ ಸಮಗ್ರ ಮಾರ್ಗದರ್ಶನದ ಕ್ಷಿಪಣಿ ಅಭಿವೃದ್ಧಿ ಯೋಜನೆಯಂಗವಾಗಿರುವ ಈ ಅಗ್ನಿ-II ಕ್ಷಿಪಣಿಯು 20 ಮೀಟರ್ ಉದ್ದವಿದೆ. 16 ಟನ್ ತೂಗುವ ಈ ಕ್ಷಿಪಣಿ, ಒಂದು ಸಾವಿರ ಕಿಲೋ ಪೇಲೋಡ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಪೇಲೋಡ್‌ಗಳ ಭಾರವನ್ನು ಕುಗ್ಗಿಸಿದಲ್ಲಿ ಈ ಕ್ಷಿಪಣಿಯು 3,000 ಕಿಲೋ ಮೀಟರ್ ದೂರ ಹಾರಬಲ್ಲುದು.
ಇದನ್ನು ರಸ್ತೆ ಹಾಗೂ ರೈಲು ಉಡ್ಡಯಕಗಳ ಮೂಲಕ ಹಾರಿಸಬಹುದಾಗಿದೆ. ಕೇವಲ 15 ನಿಮಿಷಗಳಲ್ಲಿ ಕ್ಷಿಪಣಿಯನ್ನು ಉಡಾವಣೆಗೆ ಸಿದ್ಧಪಡಿಸಬಹುದಾಗಿದೆ. ಅಗ್ನಿ ಕ್ಷಿಪಣಿ ಸರಣಿಗಳ ಅಗ್ನಿ II ಕ್ಷಿಪಣಿಯನ್ನು ಮೊದಲ ಬಾರಿಗೆ 1999ರಲ್ಲಿ ಅದೇ ಸ್ಥಳದಿಂದ ಪರೀಕ್ಷಾರ್ಥ ಉಡಾವಣೆ ನಡೆಸಲಾಗಿತ್ತು.
|