ಹದಿನೈದನೇ ಲೋಕಸಭೆಯ ಪ್ರಥಮ ಅಧಿವೇಶನವು ಜೂನ್ 2ರಂದು ನಡೆಯಲಿದ್ದು, ನೂತನ ಸದಸ್ಯರು ಪ್ರತಿಜ್ಞಾ ಸ್ವೀಕಾರ ಮಾಡಲಿದ್ದಾರೆ ಮತ್ತು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬುದಾಗಿ ಮೂಲಗಳು ಮಂಗಳವಾರ ತಿಳಿಸಿವೆ.ಅಧಿವೇಶನದಲ್ಲಿ ಲೋಕಸಭೆಯ ಅತ್ಯಂತ ಹಿರಿಯ ಸದಸ್ಯರೊಬ್ಬರನ್ನು ಲೋಕ ಸಭಾ ಸ್ಪೀಕರ್ ಆಗಿ ನೇಮಿಸಲಾಗುವುದು. ಮತ್ತು ಅವರು ನೂತನ ಸದಸ್ಯರ ಪ್ರತಿಜ್ಞಾ ಸ್ವೀಕಾರದ ಮತ್ತು ಡೆಪ್ಯುಟಿ ಸ್ಪೀಕರ್ ನೇಮಕದ ಕುರಿತು ಉಸ್ತುವಾರಿ ವಹಿಸಲಿದ್ದಾರೆ.ಒಂಬತ್ತು ಬಾರಿ ಆಯ್ಕೆಯಾಗಿರುವ ಮಾಣಿಕ್‌ರಾವ್ ಗಾವಿತ್ ಅವರಿಗೆ 27 ವರ್ಷಗಳ ಸಂಸದೀಯ ಅನುಭವವಿದ್ದು ಅವರನ್ನು ಹಂಗಾಮಿ (ಪ್ರೋಟೆಮ್) ಸ್ಪೀಕರ್ ಆಗಿ ನೇಮಿಸುವ ಸಾಧ್ಯತೆ ಇದೆ.75 ರ ಹರೆಯದ ಗಾವಿತ್ ಅವರು ಮಹಾರಾಷ್ಟ್ರದ ನಂದೂರ್‌ಬಾರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅವರು ಕಳೆದ ಯುಪಿಎ ಸರ್ಕಾರದಲ್ಲಿ ಗೃಹಇಲಾಖೆಯ ರಾಜ್ಯ ಸಚಿವರಾಗಿದ್ದರು. ಇದಲ್ಲದೆ ಸಿಪಿಐ-ಎಂನ ಬಸುದೇವ್ ಆಚಾರ್ಯ ಅವರಿಗೂ 27 ವರ್ಷ 5 ತಿಂಗಳ ಅನುಭವಿದೆ. ಇವರ ಬಳಿಕದ ಸರದಿಯಲ್ಲಿ ಕಾಂಗ್ರೆಸ್‌ನ ಕಮಲ್ ನಾಥ್(26 ವರ್ಷ 2 ತಿಂಗಳು) ಮತ್ತು ವಿಲಾಸ್ ಮುಟ್ಟೆಮ್ವಾರ್ (24 ವರ್ಷ 11 ತಿಂಗಳು) ಅವರುಗಳಿದ್ದಾರೆ.ಲೋಕಸಭಾ ಅಧಿವೇಶನದ ಮೊದಲ ಅಧಿವೇಶನವು ಅಲ್ಪಾವಧಿಯದ್ದಾಗಿರುತ್ತದೆ. ಇದೇ ಅಧಿವೇಶನವನ್ನು ಬಜೆಟ್ ಮಂಡಿಸಲು ಮುಂದುವರಿಸಬಹುದೇ ಬೇಡವೇ ಎಂಬುದು ಹೊಸ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. |